ಮೇಕೆ ಮರಿ ನುಂಗಿದ ಸುಮಾರು 14 ಅಡಿ ಉದ್ದದ ಹೆಬ್ಬಾವು|ಬೇಟೆ ಮುಗಿಸಿ ಬೆಚ್ಚಗೆ ಶೆಡ್ನಲ್ಲಿ ಮಲಗಿದ್ದ ಹಾವು ಉರಗ ತಜ್ಞರ ಕೈ ವಶ
ಚಿಕ್ಕಮಗಳೂರು: ಮೇಕೆ ಮರಿ ನುಂಗಿ ಬೆಚ್ಚಗೆ ಶೆಡ್ನಲ್ಲಿ ಮಲಗಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಉರಗ ತಜ್ಞರ ಸಹಾಯದಿಂದ ಸುರಕ್ಷಿತವಾಗಿ ಸೆರೆ ಹಿಡಿಯಲಾದ ಘಟನೆ ನಡೆದಿದೆ.
ನಗರದ ಕಾಫಿ ಮಂಡಳಿಯ ಸಮೀಪ ವೆಂಕಟಪ್ಪ ಎಂಬುವವರಿಗೆ ಸೇರಿದ ಕುರಿ ಶೆಡ್ಗೆ ಸುಮಾರು 14 ಅಡಿ ಉದ್ದದ ಹೆಬ್ಬಾವು ಬಂದು ಮೇಕೆ ಮರಿಯನ್ನು ನುಂಗಿದ್ದು,ಇದನ್ನು ಗಮನಿಸಿದ ಮಾಲೀಕ ವೆಂಕಟಪ್ಪ ಮೇಕೆ ಮರಿ ಪ್ರಾಣ ಉಳಿಸಲು ಜೋರಾಗಿ ಕಿರುಚಿದ್ದಾರೆ. ಆದರೆ, ಹೆಬ್ಬಾವು ಮಾತ್ರ ಮೇಕೆ ಮರಿ ನುಂಗುವುದನ್ನು ಬಿಡಲಿಲ್ಲ.
ಸಂಪೂರ್ಣವಾಗಿ ನುಂಗಿಯೇ ನಂತರ ಬೆಚ್ಚಗೆ ಶೆಡ್ನಲ್ಲಿಯೇ ಮಲಗಿತ್ತು.ಕೂಡಲೇ ಸ್ಥಳೀಯರ ಸಹಕಾರದಿಂದ ಉರಗ ತಜ್ಞ ನರೇಶ್ ಅವರನ್ನು ಸ್ಥಳಕ್ಕೆ ಕರೆಸಲಾಗಿದೆ.ಸುಮಾರು 30 ನಿಮಿಷಕ್ಕೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿದ ಉರಗ ತಜ್ಞ, ನಂತರ ಹಾವನ್ನು ಸೆರೆ ಹಿಡಿದು ಕುರಿಯ ಶೆಡ್ನಿಂದ ಹೊರತಂದರು.ಬಳಿಕ ನಗರದ ಹೊರ ವಲಯದ ಕರಡಿಹಳ್ಳಿ ಕಾವಲ್ ಅರಣ್ಯ ಪ್ರದೇಶದಲ್ಲಿ ಹೆಬ್ಬಾವನ್ನು ಸುರಕ್ಷಿತವಾಗಿ ಬಿಟ್ಟುಬರಲಾಗಿದೆ.