ಯೋಗಿ ತರಹ ಮೈ ಕೊಡವಿ ನಿಲ್ಲಿ ಬೊಮ್ಮಾಯಿ ಅವರೇ..-ಪ್ರಮೋದ್ ಮುತಾಲಿಕ್
ಪ್ರಚೋದನಾಕಾರಿ ಪೋಸ್ಟ್ ಹಾಕಿದ ಬಳಿಕ ಗಲಭೆ ನಡೆದ ಹುಬ್ಬಳ್ಳಿಯಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶದ ಬುಲ್ಡೋಜರ್ ಕಾರ್ಯಾಚರಣೆ ಮಾದರಿಯಲ್ಲಿ ಮುಖ್ಯಮಂತ್ರಿಯವರು ಕಠಿಣ ಕಾನೂನು ಕ್ರಮ ಜರಗಿಸಬೇಕೆಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.
ಹನುಮ ಜಯಂತಿ ದಿನದಂದು ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಪ್ರಕರಣ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್‍ನಲ್ಲಿ ಗಲಭೆಕೋರರ ಮನೆ, ಅಂಗಡಿಯನ್ನು ಧ್ವಂಸಗೊಳಿಸಿದಂತೆ ಕರ್ನಾಟಕದಲ್ಲಿ ಕೂಡ ಗಲಭೆಕೋರರ ಮನೆಗಳನ್ನು ಕಿತ್ತು ಬಿಸಾಕಿ ಎಂದು ನಾನು ಗೃಹ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಅಕ್ರಮ ಮನೆಗಳು, ಅಕ್ರಮ ಬಡಾವಣೆಗಳನ್ನು ಕಿತ್ತು ಬಿಸಾಕಿ, ಅವರ ಸೊಕ್ಕು ಹಾಗೂ ಅಹಂಕಾರವನ್ನು ಅಡಗಿಸಿ. ಅವರ ದೇಶದ್ರೋಹಿ ಕೃತ್ಯವನ್ನು ಮಟ್ಟ ಹಾಕಿ. ಒಂದು ಬಾರಿ ಯೋಗಿ ಆದಿತ್ಯನಾಥ್ ಅವರಂತೆ ಮೈ ಕೊಡವಿ ನಿಲ್ಲಿ ಬಸವರಾಜ್ ಬೊಮ್ಮಾಯಿ ಅವರೇ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮುಸ್ಲಿಂ ಕಿಡಿಗೇಡಿಗಳ ಪರವಾಗಿ ನೀವು ನಿಲ್ಲುತ್ತಿರುವುದು ನಿಮಗೆ ಕ್ಷೋಭೆ ತರುವುದಿಲ್ಲ. ಸಿಸಿಟಿ ದೃಶ್ಯವನ್ನು ಸರಿಯಾಗಿ ಪರಿಶೀಲಿಸಿ ಇಲ್ಲಿ ಯಾರು ಅಮಾಕರಲ್ಲ, ಎಲ್ಲರೂ ಗುಂಡಾಗಳೇ. ಪೊಲೀಸರು ಸರಿಯಾಗಿ ತನಿಖೆ ನಡೆಸಿದ್ದಾರೆ. ಸರ್ಕಾರ ಸರಿಯಾದ ಕ್ರಮ ಕೈಗೊಂಡಿದೆ. ಈ ಘಟನೆಗೆ ಅಲ್ಲಿನ ಕಾಂಗ್ರೆಸ್ ಶಾಸಕ ಅಬ್ಬಯ್ಯ ಅವರು ಹೊಣೆಗಾರರಾಗಿದ್ದು, ಮುಂದಿನ ಚುನಾವಣೆಯಲ್ಲಿ ಮುಸ್ಲಿಮರ ಓಟ್‍ಗಾಗಿ ಇರುವ ಈ ಘಟನೆಗೆ ಕುಮ್ಮತ್ತು ನೀಡಿದ್ದಾರೆ. ಇದರ ಹಿಂದೆ ಎಂಐಎಂ ಇದೆ ಎಂದು ನಿಶ್ಚಿತವಾಗಿ ನಾನು ಹೇಳುತ್ತೇನೆ. ಬುದ್ದಿಜೀವಿಗಳು ಮುಸ್ಲಿಮರಿಂದ ಗಲಾಟೆಯಾಯಿತು ಎಂದರೆ ಸುಮ್ಮನೆ ಇರುತ್ತಾರೆ. ಅದೇ ಮುಸ್ಲಿಮರಿಗೆ ತೊಂದರೆಯಾಯಿತು ಎಂದ ಕ್ಷಣ ಬಾಯಿಬಿಡುತ್ತಾರೆ. ಬಾಯಿ ಮುಚ್ಚಿಕೊಂಡಿರುವ ಬುದ್ಧಿ ಜೀವಿಗಳು ಮುಸ್ಲಿಂ ಕ್ರಿಶ್ಚಿಯನ್‍ರ ಎಜೆಂಟ್‍ಗಳಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ವಿವಾದಾತ್ಮಕ ಅನಿಮೆಟೆಡ್ ವಿಡಿಯೋವನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಹಾಕಿಕೊಂಡಿದ್ದ ಯುವಕನ ಬಂಧನಕ್ಕೆ ಒತ್ತಾಯಸಿ ಉದ್ರಿಕ್ತ ಮುಸ್ಲಿಮರ ಗುಂಪು ಗಲಭೆ ನಡೆಸಿತ್ತು. ಘಟನೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿ, ವಾಹನಗಳನ್ನು ಜಖಂಗೊಳಿಸಿದ್ದರು. ಪೋಲಿಸ್ ವಾಹನಗಳನ್ನು ಕೆಡವಿ ಆಕ್ರೋಶ ವ್ಯಕ್ತಪಡಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಆಧಾರದ ಮೇಲೆ 89ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದರು. ನಾಲ್ಕು ಬಾಲಕರು ಇದ್ದು, ಅವರನ್ನೂ ಸುಪರ್ದಿಗೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಂಧಿಸಿರುವ ಕಿಡಿಗೇಡಿಗಳ ವಿರುದ್ಧ ಅವರ ಪೂರ್ವಪರ ತಿಳಿದು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಉತ್ತರ ಪ್ರದೇಶ ಮಾದರಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುತಾಲಿಕ್ ಒತ್ತಾಯಿಸಿದ್ದಾರೆ.