ಕಾಮಣ್ಣನ ಕುರಿತಾದ ವಿಶೇಷ ನಂಬಿಕೆ ಮತ್ತು ಆಚರಣೆಗಳು; ಹೋಳಿ ಹಬ್ಬದ ರಂಗು ರಂಗಿನ ಮಾಹಿತಿ
ಹೋಳಿ ಹಬ್ಬ ಬಹಳ ವಿಶೇಷವಾದ ಹಬ್ಬ. ಈ ಹಬ್ಬದಲ್ಲಿ ಬಣ್ಣಗಳ ಜೊತೆ ಆಟ ಆಡಲು ಹಿರಿಯರು-ಕಿರಿಯರು, ಯಾವುದೇ ಜಾತಿ ಅಂತಸ್ತು ಎಂಬ ಬೇಧವಿಲ್ಲದೇ ಪ್ರತಿಯೊಬ್ಬರು ಖುಷಿಯಾಗಿ ಪಾಲ್ಗೊಳ್ಳುತ್ತಾರೆ. ಹೋಳಿ ಹಬ್ಬವನ್ನು ಕಾಮನ ಹಬ್ಬ, ರಂಗಪಂಚಮಿ ಅಂತಲೂ ಕರೆಯಲಾಗುತ್ತೆ. ಇತಿಹಾಸ ಕಾಲದಲ್ಲಿಯೂ ಹೋಳಿ ಹಬ್ಬ ಆಚರಣೆಯ ಬಗ್ಗೆ ಐತಿಹ್ಯಗಳು ದೊರೆತಿವೆ. ವಿಜಯನಗರದ ಅರಸರ ಕಾಲದಲ್ಲಿ ಹಾಗೂ ಅಹಮದ್ನಗರ, ಮೇವಾರ ಮತ್ತು ಬುಂಡಿಯಲ್ಲಿರುವ ಚಿತ್ರಕಲೆಯಲ್ಲಿ ಈ ಹಬ್ಬ ಆಚರಣೆ ಕುರಿತ ಕುರುಹುಗಳು ದೊರೆತಿವೆ. ಭಾಗವತ ಪುರಾಣ ಮತ್ತು ವಿಷ್ಣು ಪುರಾಣದಲ್ಲಿಯೂ ಈ ಕುರಿತ ಮಾಹಿತಿ ಉಲ್ಲೇಖವಿದೆ.
ಹಿಂದಿನ ದಿನ ಕಾಮಣ್ಣನನ್ನು ಕೂರಿಸಿ ಮರುದಿನ ಬೆಳಗ್ಗೆ ದಹನ ಮಾಡಿ ಬಣ್ಣ ಆಡುತ್ತಾರೆ. ಇಂದು ಕಾಮನ ಪ್ರತಿಷ್ಟಾಪನೆ ಗ್ರಾಮೀಣ ಪ್ರದೇಶದಲ್ಲಿ ಬಹಳ ವಿಜೃಂಭಣೆಯಿಂದ ಜರುಗುತ್ತದೆ. ಊರಿನ ಪ್ರತಿ ಓಣಿ(ಗಲ್ಲಿಗಳಲ್ಲಿ)ಗಳಲ್ಲಿ ಒಂದೊಂದು ನಿಗದಿತ ಸ್ಥಳದಲ್ಲಿ ಕಾಮನ ಕಟ್ಟೆಯೆಂಬ ಸ್ಥಳದಲ್ಲಿ ರತಿಮನ್ಮಥರ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡುವರು.
ಕಾಮಣ್ಣನ ಕುರಿತಾದ ನಂಬಿಕೆಗಳು/ ಆಚರಣೆಗಳು;
ಕೆಲವರು ಈ ಕಾಮನ ಬೆಂಕಿಯಲ್ಲಿ ಕಡಲೆ ಹುರಿದುಕೊಳ್ಳುವರು. ಈ ಕಡಲೆ ತಿಂದರೆ ಬಾಯಿಯಲ್ಲಿನ ಹಲ್ಲುಗಳು ಗಟ್ಟಿಯಾಗುತ್ತವೆ ಎಂಬ ನಂಬಿಕೆ.
ಕಾಮನನ್ನು ಸುಟ್ಟ ಬೆಂಕಿಯ ಕೆಂಡವನ್ನು ಕೆಲವು ಜನ ತಮ್ಮ ಮನೆಗೆ ತರುತ್ತಾರೆ. ಆ ಕೆಂಡದಿಂದ ಮನೆಯ ಒಲೆಯನ್ನು ಹೊತ್ತಿಸಿದರೆ ವರ್ಷದುದ್ದಕ್ಕೂ ಅವರ ಮನೆ ಅಡುಗೆ ಸಂತೃಷ್ಟಿಯಿಂದ ಇರುತ್ತದೆ ಎಂಬ ನಂಬಿಕೆ ಆಚರಣೆಯಿದೆ.
ಕಾಮನ ಬೂದಿಯನ್ನು ಮನೆಗೆ ಒಯ್ದು ಆ ವರ್ಷದ ಮೊದಲ ಮಳೆಯ ನಂತರ ಬಿತ್ತುವ ಬೀಜದಲ್ಲಿ ಆ ಬೂದಿಯನ್ನು ಬೆರೆಸಿ ಬಿತ್ತನೆ ಮಾಡಿದರೆ ಬೆಳೆ ಚನ್ನಾಗಿ ಬರುತ್ತದೆ ಎಂಬ ಪ್ರತೀತಿ ಇದೆ.
ಕಾಮದಹನ ಸಂದರ್ಭ ತೆಂಗಿನ ಕಾಯಿಯನ್ನು ಕಾಮನ ತಲೆಯನ್ನು ಗುರಿಯಾಗಿಸಿಕೊಂಡು ಎಸೆಯುವರು. ಆಗ ಅವನ ರುಂಡವು ಯಾವ ದಿಕ್ಕಿನತ್ತ ಬೀಳುತ್ತದೆಯೋ ಆ ದಿಕ್ಕಿನಲ್ಲಿ ಮಳೆ-ಬೆಳೆ ಬಹಳ ಆಗುತ್ತದೆ ಎನ್ನುವ ನಂಬಿಕೆ ಇದೆ.
ಕಾಮಣ್ಣನ ಸುಟ್ಟ ಐದು ದಿನಕ್ಕೆ ಮಳೆಯಾಗುತ್ತದೆ. ಅಂದು ಕಾಮಣ್ಣನ ಬೂದಿ ತೋಯಿಸುತ್ತದೆ. ಅದು ಕಾಮನ ಹೆಂಡತಿ ರತಿಯ ಕಣ್ಣೀರು ಎಂಬುದು ಗ್ರಾಮೀಣ ಜನರ ನಂಬಿಕೆ.
ಹೀಗೆಲ್ಲ ಹಲವಾರು ನಂಬಿಕೆ, ಅಚರಣೆಗಳಿವೆ.
ನಮ್ಮ ಅಂತರಂಗ ಬಹಿರಂಗ ಶುದ್ಧಿಯಿಂದ ಕಾಮವನ್ನು ನಿಗ್ರಹಿಸಿ ಪ್ರೇಮವನ್ನು ಸಾಕ್ಷಾತ್ಕರಿಸಿಕೊಳ್ಳುವ ಮೂಲಕ ಬದುಕನ್ನು ಕಂಡುಕೊಳ್ಳುವ ಪರಿಯೇ ಕಾಮ ದಹನದ ಹೋಳಿ ಹಬ್ಬ.