ಗಂಡನ ಭಯದಿಂದ ತಾನು ಹೆತ್ತ ಮೂರನೇ ಮಗುವೂ ಹೆಣ್ಣು ಎಂದು ಆಸ್ಪತ್ರೆಯ ಹೊರಗೆ ಬಿಟ್ಟು ಬಂದ ಹೆತ್ತ ತಾಯಿ| ಪಶ್ಚಾತ್ತಾಪದಿಂದ ನೊಂದ ತಾಯಿ ಅನಂತರ ಮಾಡಿದ್ದಾದರೂ ಏನು ?

ಸಮಾಜದಲ್ಲಿ ಈಗಲೂ ಗಂಡು ಮಕ್ಕಳಷ್ಟೇ ಹೆಣ್ಣುಮಕ್ಕಳು ಕೂಡಾ ಸಮಾನರು ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಇಂದಿಗೂ ಈ ತಾರತಮ್ಯದ ಪಿಡುಗನ್ನು ಸಂಪೂರ್ಣವಾಗಿ ಹೋಗಲಾಡಿಸಲು ಆಗುತ್ತಿಲ್ಲ. ಹೌದು, ಈ ಮಾತಿಗೆ ಸಾಕ್ಷಿ ಎಂಬಂತೆ ಹೆತ್ತ ತಾಯಿಯೊಬ್ಬಳು ಆಗ ತಾನೇ ಜನ್ಮ ನೀಡಿದ ಮಗುವನ್ನು ಆಸ್ಪತ್ರೆಯ ಹೊರಗೆ ಬಿಟ್ಟು ಬಂದಿದ್ದಳು. ಏಕೆಂದರೆ ಅದು ಹೆಣ್ಣು ಮಗುವಾಗಿತ್ತು.

ಈ ಘಟನೆ ಚೆನ್ನೈನಲ್ಲಿ ನಡೆದಿದೆ.

ಈ ಮಹಿಳೆ ಈಗಾಗಲೇ ಇಬ್ಬರು ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಳು. ಇದರಿಂದಾಗಿ ಪತಿ ಕುಟುಂಬದಲ್ಲಿ ರಾದ್ಧಾಂತ, ಜಗಳ, ಕಿರಿಕಿರಿ ಮಾನಸಿಕ ಹಿಂಸೆಯನ್ನು ಅನುಭವಿಸಿದ್ದಳು ಈ ಮಹಿಳೆ. ಇದೇ ಭಯದಲ್ಲಿ ತೀವ್ರ ಆತಂಕ, ಹಾಗೂ ಭಯದಲ್ಲಿದ್ದ ಮಹಿಳೆ ಮೂರನೇ ಬಾರಿ ಗರ್ಭವತಿಯಾಗಿ ಹೆರಿಗೆ ಆಗಿತ್ತು. ಅದು ಕೂಡಾ ಹೆಣ್ಣು ಮಗುವೇ ಆಗಿತ್ತು. ಹೀಗಾಗಿ ಗಂಡನ ಭಯ, ಆತಂಕದಲ್ಲಿದ್ದ ಮಹಿಳೆ ಹೆತ್ತ ಮಗುವನ್ನು ಆಸ್ಪತ್ರೆಯ ಹೊರಗೆ ಬಿಟ್ಟು ಹೋಗಿದ್ದಳು.

ಎಷ್ಟೇ ಆದರೂ ಆಕೆ ಹೆತ್ತ ತಾಯಿ. ಕರುಳ ಬಳ್ಳಿಯ ಸಂಬಂಧ ಅಷ್ಟು ಬೇಗ ಕಡಿಯುವುದಿಲ್ಲ. ಮಗುವನ್ನು ಬಿಟ್ಟು ಗಂಡನ ಮನೆಗೆ ಬಂದಿದ್ದ ಈಕೆಗೆ ಮಗು ಬಿಟ್ಟು ಇರಲಿಕ್ಕೆ ಆಗಲಿಲ್ಲ. ಪಶ್ಚಾತ್ತಾಪದ ವೇದನೆಯಿಂದ ನರಳಿದ್ದಳು. ಕಡೆಗೂ ಒಂದು ನಿರ್ಧಾರ ಮಾಡಿ, ಪತಿಯ ಮನೆಯವರು ಏನೇ ಮಾಡಿದರೂ ಸರಿ ನನಗೆ ನನ್ನ ಮಗು ಬೇಕು ಎಂದು ಮರಳಿ ಅದೇ ಆಸ್ಪತ್ರೆಗೆ ಬಂದಿದ್ದಾಳೆ.

ಆದರೆ ಇತ್ತ ಕಡೆ ಆಸ್ಪತ್ರೆಯ ಹೊರಗೆ ಅಳುತ್ತಿದ್ದ ಮಗುವನ್ನು ಗಮನಿಸಿದ ಕಟ್ಟಡ ಕಾರ್ಮಿಕರು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಧಾವಿಸಿದ ಪೊಲೀಸರು, ಹಸುಗೂಸನ್ನು ತಿರುಚ್ಚಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದರು. ಅಲ್ಲದೇ ಪ್ರಕರಣ ದಾಖಲಿಸಿಕೊಂಡು ಮಗುವಿನ ಪೋಷಕರಿಗಾಗಿ ಈ ಹುಡುಕಾಟ ನಡೆಸಿದ್ದರು ಕೂಡಾ.

ಇತ್ತ ಕಡೆ ಪಶ್ಚತ್ತಾಪದಲ್ಲಿ ನೊಂದ ತಾಯಿ ಪೊಲೀಸ್ ಠಾಣೆಗೆ ಬಂದಿದ್ದಾಳೆ. ಪೊಲೀಸರಲ್ಲಿ ಎಲ್ಲಾ‌ ವಿಷಯವನ್ನು ಹೇಳಿದ್ದಾಳೆ. ಗಂಡನ ಭಯದಿಂದ ಈ ರೀತಿಯಾಗಿ ಮಾಡಿದ್ದೇನೆ. ಹೀಗಾಗಿ ನನ್ನ ಮಗುವನ್ನು ಮರಳಿ ಕೊಡುವಂತೆ ಮನವಿ ಮಾಡಿದ್ದಾಳೆ.

Leave A Reply

Your email address will not be published.