ಮಂಗಳೂರು : ಆಂಬ್ಯುಲೆನ್ಸ್ಗೆ ದಾರಿ ಬಿಡದೆ ಸತಾಯಿಸಿ ವಿಕೃತಿ ಮೆರೆದಾತನ ಬಂಧನ
ಮಂಗಳೂರು : ಮಂಗಳೂರು – ಉಡುಪಿ ಹೆದ್ದಾರಿಯಲ್ಲಿ ಆಂಬ್ಯುಲೆನ್ಸ್ ಗೆ ದಾರಿ ಬಿಡದೆ ಸತಾಯಿಸಿದ ಕೇಸ್ ಗೆ ಸಂಬಂಧಿಸಿದಂತೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಈತನ ಹೆಸರು ಮೋನಿಶ್. ಈತನನ್ನು ಬಂಧಿಸಲಾಗಿದೆ. ಈತನ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ಧ ಮಂಗಳೂರು ನಗರ ಉತ್ತರ ಸಂಚಾರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 279 ಹಾಗೂ ಭಾರತೀಯ ಮೋಟಾರ್ ವಾಹನ ಕಾಯ್ದೆಯ 184 ರ ಅಡಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ : ಬುಧವಾರ ( ನಿನ್ನೆ) ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ ಉತ್ತರ ಕನ್ನಡದ ಭಟ್ಕಳಕ್ಕೆ ರೋಗಿಯನ್ನು ಕರೆದುಕೊಂಡು ಆಂಬುಲೆನ್ಸ್ ಮೂಲಕ ಕರೆದುಕೊಂಡು ಹೋಗಲಾಗುತ್ತಿತ್ತು. ಈ ಸಮಯದಲ್ಲಿ KA 19 MD6843 ನಂಬರ್ ಪ್ಲೇಟ್ ಹಾಕಿದ್ದ ಕಾರು ಚಾಲಕನೊಬ್ಬ 40 ಕಿ.ಮೀ. ವರೆಗೂ ದಾರಿ ಬಿಡದೆ ಪುಂಡಾಟ ಮೆರೆದಿದ್ದಾನೆ.
ಮೂಲ್ಕಿಯಿಂದ ಉಡುಪಿಯವರೆಗೂ ದಾರಿ ಬಿಡದೇ ಉದ್ಧಟತನ ತೋರಿದ್ದಾನೆ.
ಅಷ್ಟು ಮಾತ್ರವಲ್ಲದೇ ರಾತ್ರಿ ಮಣಿಪಾಲದಿಂದ ಮಂಗಳೂರಿಗೆ ಬರುತ್ತಿದ್ದ ಮತ್ತೊಂದು ಆಂಬ್ಯುಲೆನ್ಸ್ ಗೂ ಈತನ ಕಾರು ಅಡ್ಡ ಬಂದು ತೊಂದರೆ ಕೊಟ್ಟಿದ್ದಾನೆ.
ಜೀವದ ಜೊತೆ ಆಟವಾಡಿದ ಈತನ ಈ ಅಮಾನವೀಯ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕಾರು ಚಾಲಕನ ವರ್ತನೆಯನ್ನು ಆಂಬ್ಯುಲೆನ್ಸ್ ಸಿಬ್ಬಂದಿಯೇ ವೀಡಿಯೋ ಮಾಡಿದ್ದಾರೆ. ಈ ದೃಶ್ಯ ವೈರಲ್ ಆಗಿ, ಭಾರೀ ಆಕ್ರೋಶ ವ್ಯಕ್ತವಾಗಿತ್ತು.