ಉಡುಪಿ : ಸಾಲ ತೀರಿಸಲಾಗದೆ ಮನನೊಂದು, ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆಗೆ ಶರಣು
‘ಲೋನ್ ಬಾಕಿ ಇದೆ ಎಂದು ನನ್ನ ಮೊಬೈಲ್ಗೆ ಕರೆ ಬಂದ್ರೆ ಸತ್ತು ಹೋದ ಅಂತ ಹೇಳಿ…’ ಎಂದು ಡೆತ್ನೋಟ್ ಬರೆದಿಟ್ಟು ಮೃದು ಮನಸ್ಸಿನ ಯುವಕನೊಬ್ಬ ತನ್ನನ್ನು ತಾನು ಬಲಿ ತೆಗೆದುಕೊಂಡಿದ್ದಾನೆ.
ವಿಶ್ಲೇಶ್ ಮೃತ ದುರ್ದೈವಿ. ಈತ ಮನೆ ಮುಂದೆ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಉಡುಪಿಯಲ್ಲಿ ನಡೆದಿದೆ. ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ವಿಶ್ಲೇಶ್, ಸ್ನೇಹಿತನ ಜೊತೆ ಬಿಜಿನೆಸ್ ಆರಂಭಿಸಲು ಸಾಲ ಮಾಡಿದ್ದ.
ಸಾಲ ಮರುಪಾವತಿ ಮಾಡಲಾಗದೆ ಆತಂಕಗೊಂಡಿದ್ದ ವಿಶ್ಲೇಶ್, ‘ಲೋನ್ ಬಾಕಿ ಇದೆ ಎಂದು ಕರೆ ಬಂದ್ರೆ ಅವನು ಯಾರೆಂದು ಗೊತ್ತಿಲ್ಲ ಅಂತೇಳಿ. ಅಥವಾ ನಾನು ಸತ್ತು ಹೋದೆ ಎಂದು ಹೇಳಿ, ಮೊಬೈಲ್ ಆ್ಯಪ್ನಲ್ಲಿ ನಾನು ಪಾವತಿ ಸಾಲವನ್ನು ತೀರಿಸಲು ಆಗುತ್ತಿಲ್ಲ. ಅದಕ್ಕೆ ಸೂಸೈಡ್ ಮಾಡಿಕೊಳ್ಳುತ್ತಿರುವೆ. ನನ್ನ ಸಾವಿಗೆ ನಾನೇ ಕಾರಣ. ನಾನು ಕೆಲಸ ಮಾಡುವ ಕಂಪನಿಗೆ ನನ್ನ ಸಾವಿನ ಸುದ್ದಿ ತಿಳಿಸಿ. ಎಲ್ಲರಿಗೂ ಮೋಸ ಮಾಡಿ ಹೋಗುತ್ತಿರುವೆ ಕ್ಷಮಿಸಿ’ ಎಂದು ಡೆತ್ನೋಟ್ನಲ್ಲಿ ಮನದ ನೋವನ್ನು ವಿವರಿಸಿದ್ದಾನೆ. ಡೆತ್ ನೋಟ್ನಲ್ಲಿ ತನ್ನ ಎಟಿಎಂ ಪಾಸ್ವರ್ಡ್ ಅನ್ನೂ ನಮೂದಿಸಿದ್ದಾನೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಬೈಲ್ ಆಪ್ ನಲ್ಲಿ ಸಾಲ ಮಾಡಿದ್ದಕ್ಕೆ ತನ್ನನ್ನು ತಾನು ಕ್ಷಮಿಸಲಾಗದೆ ತನ್ನ ಜೀವನಕ್ಕೆ ಅಂತ್ಯಹಾಡಿದ ಈ ಯುವಕನ ಸಾವು ಮನಕಲಕುವಂತಿದೆ. ಸಾಲ ಮಾಡಿ ಎಷ್ಟೋ ಬಾರಿ ತಪ್ಪಿಸಿಕೊಳ್ಳುವ ಜನರ ನಡುವೆ ಈತ ತನ್ನ ಮುಗ್ಧತೆಯನ್ನು ಜಗಕ್ಕೆ ಸಾರಿದ್ದಾನೆ.