ಮತಾಂತರ ನಿಷೇಧ ಕಾಯ್ದೆಗೆ ಸದ್ಯಕ್ಕಿಲ್ಲ ಗ್ರೀನ್ ಸಿಗ್ನಲ್ !! | ರಾಜ್ಯ ಸರ್ಕಾರದಿಂದ ವಿಧೇಯಕ ಜಾರಿ ವಿಳಂಬ ಸಾಧ್ಯತೆ

ವಿವಾದಿತ ಮತಾಂತರ ನಿಷೇಧ ವಿಧೇಯಕಕ್ಕೆ ಬೆಳಗಾವಿ ಅಧಿವೇಶನದಲ್ಲಿ ಮುಕ್ತಿ ಸಿಗುವ ಸಾಧ್ಯತೆ ಕಾಣುತ್ತಿಲ್ಲ. ಬಹು ಚರ್ಚಿತವಾದ ಮತಾಂತರ ನಿಷೇಧ ವಿಧೇಯಕ ಜಾರಿ ವಿಳಂಬವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಬೆಳಗಾವಿ ಅಧಿವೇಶನದಲ್ಲೇ ವಿಧೇಯಕ ಅಂಗೀಕಾರಕ್ಕೆ ಸರಕಾರ ಮುಂದಾಗಿತ್ತು. ಆದರೆ ಇದೀಗ ಮತಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಿದೆ. ತರಾತುರಿಯಲ್ಲಿ ವಿಧೇಯಕ ಜಾರಿ ಮಾಡುವುದು ಸೂಕ್ತವಲ್ಲ ಎನ್ನುವ ತೀರ್ಮಾನಕ್ಕೆ ಸರ್ಕಾರ ಬಂದಿದ್ದು, ಸಾರ್ವಜನಿಕವಾಗಿ ಚರ್ಚೆ ಆಗುತ್ತಿರುವ ವಿಧೇಯಕ ತರಲು ಹೊರಟ ಸರಕಾರದಿಂದಲೇ ಇದೀಗ ನಿಧಾನಗತಿಯ ನಡೆ ಕಂಡು ಬರುತ್ತಿದೆ.

ಆಡಳಿತಾರೂಢ ಬಿಜೆಪಿಗೆ ವಿಧಾನ ಪರಿಷತ್ ನಲ್ಲಿ ಬಹುಮತವಿರದ ಹಿನ್ನೆಲೆಯಲ್ಲಿ ವಿಧೇಯಕ ಜಾರಿ ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ. ವಿಧಾನ ಸಭೆಯಲ್ಲಿ ಡಿಸೆಂಬರ್ 17 ರಂದು ಮಂಡನೆಯಾಗುವ ವಿಧೇಯಕ ವಿಧಾನ ಪರಿಷತ್ ನಲ್ಲಿ ಮಂಡನೆಯಾಗಲ್ಲ. ವಿವಾದಿತ
ಮತಾಂತರ ನಿಷೇಧ ಕಾಯಿದೆ ಜಾರಿಗೆ ಜೆಡಿಎಸ್ ಕೂಡ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ವಿಳಂಬವಾಗಲಿದೆ.

ನಾಳೆ ವಿಧಾನ ಸಭೆಯಲ್ಲಿ ಮಾತ್ರ ವಿಧೇಯಕ ಮಂಡನೆ ಮಾಡಲು ಶಾಸಕಾಂಗ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ವಿಧಾನಪರಿಷತ್ ನಲ್ಲಿ ವಿಧೇಯಕ ಅಂಗಿಕಾರ ಆಗುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ ಬಿಜೆಪಿ ಮುಂದಿನ ಜನವರಿಯಲ್ಲಿ ನಡೆಯುವ ಜಂಟಿ ಅಧಿವೇಶನದ ವೇಳೆಯಲ್ಲಿ ವಿಧೇಯಕ ಮಂಡನೆ ಮಾಡುವ ಚಿಂತನೆಯಲ್ಲಿದೆ.

Leave A Reply

Your email address will not be published.