ಹೆಣ್ಣುಮಕ್ಕಳಿಗೊಂದು ಗುಡ್ ನ್ಯೂಸ್ !! | ವಿವಾಹದ ಕನಿಷ್ಠ ವಯಸ್ಸನ್ನು 18 ರಿಂದ 21ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ

ಹೆಣ್ಣುಮಕ್ಕಳಿಗೊಂದು ಸಿಹಿಸುದ್ದಿ ಇದೆ. ಗಂಡುಮಕ್ಕಳ ರೀತಿಯಲ್ಲಿಯೇ ಹೆಣ್ಣುಮಕ್ಕಳ ವಿವಾಹದ ಕನಿಷ್ಠ ವಯಸ್ಸನ್ನು 18ರಿಂದ 21ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ದೇಶದ 74ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಅಂದರೆ 2020ರ ಆಗಸ್ಟ್‌ 15ರಂದು ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡುವಾಗ ಈ ವಿಚಾರವನ್ನು ಪ್ರಸ್ತಾಪಸಿದ್ದರು. ಹೆಣ್ಣುಮಕ್ಕಳ ಆರೋಗ್ಯದ ವಿಚಾರವಾಗಿ ಸರ್ಕಾರ ಬದ್ಧವಾಗಿದೆ. ಅಪೌಷ್ಟಿಕತೆಯಿಂದ ಹೆಣ್ಣುಮಕ್ಕಳನ್ನು ರಕ್ಷಿಸುವುದು ಸರ್ಕಾರದ ಉದ್ದೇಶ. ಅವರು ಸರಿಯಾದ ವಯಸ್ಸಿನಲ್ಲಿ ವಿವಾಹವಾಗುವುದು ಸೂಕ್ತ ಎಂದು ಪ್ರಧಾನಿ ಮೋದಿ ಆಶಯ ವ್ಯಕ್ತಪಡಿಸಿದ್ದಾರೆ.

ಸದ್ಯ ಇರುವ ಕಾನೂನಿನ ಪ್ರಕಾರ, ನಿಗದಿಪಡಿಸಲಾಗಿರುವ ವಿವಾಹದ ವಯಸ್ಸು ಗಂಡುಮಕ್ಕಳಿಗೆ 21 ಹಾಗೂ ಹೆಣ್ಣುಮಕ್ಕಳಿಗೆ 18 ವರ್ಷ. ಈ ಹಿನ್ನೆಲೆಯಲ್ಲಿ ಹೊಸ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಬಾಲ್ಯವಿವಾಹ ನಿಷೇಧ ಕಾಯಿದೆ, ವಿಶೇಷ ವಿವಾಹ ಕಾಯಿದೆ ಮತ್ತು ಹಿಂದೂ ವಿವಾಹ ಕಾಯಿದೆಗಳಲ್ಲಿ ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ.

ಜಯಾ ಜೇಟ್ಲಿ ನೇತೃತ್ವದ ನೀತಿ ಆಯೋಗದ ಕಾರ್ಯಪಡೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದೆ. ಕಳೆದ ವರ್ಷದ ಜುಲೈನಲ್ಲಿ ವಿ.ಕೆ.ಪೌಲ್‌, ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಕಾನೂನು ಸಚಿವಾಲಯದ ಸದಸ್ಯರನ್ನೊಳಗೊಂಡ ಟಾಸ್ಕ್‌ ಫೋರ್ಸ್‌ ಅನ್ನು ಕೇಂದ್ರ ಸರ್ಕಾರ ರಚಿಸಿತ್ತು.

ಮೊದಲ ಗರ್ಭಧಾರಣೆಯ ಸಮಯದಲ್ಲಿ ಮಹಿಳೆಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಎಂದು ಟಾಸ್ಕ್‌ ಫೋರ್ಸ್‌ ಪ್ರತಿಪಾದಿಸಿದ್ದ ಪ್ರಸ್ತಾವನೆಯ ಶಿಫಾರಸುಗಳನ್ನು ಡಿಸೆಂಬರ್‌ನಲ್ಲಿ ಸಲ್ಲಿಸಲಾಯಿತು. ಹಾಗಾಗಿ ಇದೀಗ ಈ ಪ್ರಸ್ತಾವನೆಗೆ ಅನುಮೋದನೆ ದೊರಕಿದೆ.

Leave A Reply

Your email address will not be published.