20 ವರ್ಷಗಳ ಹಿಂದೆ ಉಪ್ಪಿನಂಗಡಿಯಲ್ಲಿ ನಡೆದಿದ್ದ ಸೂತ್ರಬೆಟ್ಟು ವಿಶ್ವನಾಥ ರೈ ಕೊಲೆ ಪ್ರಕರಣ | ಕೋಡಿಂಬಾಡಿ ವಿಶ್ವನಾಥ ಶೆಟ್ಟಿ ಅಪರಾಧಿ ಎಂದು ಕೋರ್ಟ್ ಘೋಷಣೆ,ನಾಳೆ ಶಿಕ್ಷೆಯ ಪ್ರಮಾಣ ಪ್ರಕಟ

ಪುತ್ತೂರು : ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಪುತ್ತೂರು ಸೂತ್ರಬೆಟ್ಟುವಿನ ವಿಶ್ವನಾಥ ರೈಯವರನ್ನು 20 ವರ್ಷಗಳ ಹಿಂದೆ ಉಪ್ಪಿನಂಗಡಿಯಲ್ಲಿ ಕೊಲೆ ಮಾಡಿದ್ದ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದ ಕೋಡಿಂಬಾಡಿಯ ಅಂತರ ನಿವಾಸಿ ವಿಶ್ವನಾಥ ಶೆಟ್ಟಿ ಯಾನೆ ಪಂಚಮಿ ವಿಶ್ವ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಮಾನಿಸಿದ್ದು ಅಪರಾಧಿಗೆ ಶಿಕ್ಷೆಯ ಪ್ರಮಾಣ ದ.15ರಂದು ಪ್ರಕಟವಾಗಲಿದೆ.

2001ರ ಜೂನ್ 7ರಂದು ರಾತ್ರಿ ವೇಳೆ ಫೈನಾನ್ಸ್ ಉದ್ಯಮಿ ಬಡ್ಡಿ ವಿಶ್ವ ಯಾನೆ ಸೂತ್ರಬೆಟ್ಟು ವಿಶ್ವನಾಥ ರೈಯವರ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ನಡೆಸಲಾಗಿತ್ತು.

ಕೃತ್ಯದ ಬಳಿಕ ಪರಾರಿಯಾಗಿದ್ದ ಆರೋಪಿ ಪಂಚಮಿ ವಿಶ್ವ ಯಾನೆ ಕೋಡಿಂಬಾಡಿ ವಿಶ್ವನಾಥ ಶೆಟ್ಟಿಯವರನ್ನು 13ವರ್ಷಗಳ ಬಳಿಕ ಪೊಲೀಸರು ತಮಿಳ್ನಾಡಿನಲ್ಲಿ ಪತ್ತೆ ಮಾಡಿ ಬಂಧಿಸಿ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ಕೆಲ ಸಮಯದ ಬಳಿಕ ಆರೋಪಿಯು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.ಆ ಬಳಿಕ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆರೋಪಿ ವಿಶ್ವನಾಥ ಶೆಟ್ಟಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಪ್ರಕಟಿಸಿದೆ.ಈ ಸಂದರ್ಭ ಅಪರಾಧಿ ನ್ಯಾಯಾಲಯದಲ್ಲಿ ಹಾಜರಿದ್ದರು.ವಿಶ್ವನಾಥ ರೈಯವರನ್ನು ಕೊಲೆ ಮಾಡಿರುವುದು, ಸಾಕ್ಷಿನಾಶ ಮಾಡಿರುವುದು ಹಾಗೂ ಕೊಲೆ ಬೆದರಿಕೆಯೊಡ್ಡಿದ್ದ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದ್ದು ಶಿಕ್ಷೆಯ ಪ್ರಮಾಣ ದ.೧೫ರಂದು ಪ್ರಕಟವಾಗಲಿದೆ.ಪ್ರಾಸಿಕ್ಯೂಶನ್ ಪರವಾಗಿ ಸರಕಾರಿ ಅಭಿಯೋಜಕ ಪ್ರವೀಣ್ ಕುಮಾರ್ ವಾದಿಸಿದ್ದರು.

ಕಾರಲ್ಲಿ ಮೃತದೇಹ ಕೊಂಡೊಯ್ದು ಕಂದಕಕ್ಕೆ ಎಸೆಯಲಾಗಿತ್ತು

ಕೊಲೆ ಕೃತ್ಯವೆಸಗಿದ ಬಳಿಕ ಹೊನ್ನಾವರದವರೆಗೆ ತನ್ನ ಝೆನ್ ಕಾರಿನಲ್ಲಿ ಶವವನ್ನು ಕೊಂಡು ಹೋಗಿ ಅಲ್ಲಿ ಕಂದಕಕ್ಕೆ ಶವವನ್ನು ಬಿಸಾಡಿ ಮರಳಿ ಮಂಗಳೂರು ಕದ್ರಿಯವರೆಗೆ ಅದೇ ಕಾರಲ್ಲಿ ಬಂದಿದ್ದ ಆರೋಪಿ ಪಂಚಮಿ ವಿಶ್ವ ಯಾನೆ ಕೋಡಿಂಬಾಡಿ ವಿಶ್ವನಾಥ ಶೆಟ್ಟಿ ತನ್ನ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ.ಕೃತ್ಯ ಎಸಗಿ ಹಲವು ವರ್ಷಗಳಾದರೂ ಆರೋಪಿಯ ಪತ್ತೆಯಾಗದೇ ಇದ್ದುದರಿಂದ ಇದೊಂದು ಎಲ್‌ಪಿಸಿ ಪ್ರಕರಣವಾಗಿ ದಾಖಲಾಗಿತ್ತು.

13 ವರ್ಷಗಳ ಬಳಿಕ ಆರೋಪಿಯ ಬಂಧನ:
2001ರಲ್ಲಿ ಕೊಲೆ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು 13ವರ್ಷಗಳ ಬಳಿಕ ತಮಿಳ್ನಾಡಿನಲ್ಲಿ ಬಂಧಿಸಿದ್ದರು.2014ರ ಆ.11ರಂದು ಬೆಳಿಗ್ಗೆ ಆರೋಪಿಯನ್ನು ಪೊಲೀಸರು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಕೊಲೆ ಪ್ರಕರಣ ಬಯಲಾಗಿದ್ದು ಹೀಗೆ…:
ಅಂದು 2001 ಜೂನ್ 11ರ ಉಪ್ಪಿನಂಗಡಿಯಿಂದ ಸುಮಾರು 250 ಕಿಲೋ ಮೀಟರ್ ದೂರದ ಹೊನ್ನಾವರ ಸಮೀಪದ ಗೇರುಸೊಪ್ಪ ಬಳಿಯ ಮೂಡ್ಕಾಣಿ ಎಂಬಲ್ಲಿ 20 ಅಡಿ ಆಳದಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು.ಈ ಅಪರಿಚಿತ ಶವದ ಅಂಗಿಯಲ್ಲಿ “ಪುತ್ತೂರು ಸಿಂಧು ಟೈಲರ್” ಎಂಬ ಲೇಬಲ್ ಇತ್ತು.ಇದರ ಆಧಾರದಲ್ಲಿ ಪೊಲೀಸರು ಪುತ್ತೂರಿನ ಟೈಲರ್ ಸುಭಾಶ್ಚಂದ್ರ ಪೂಜಾರಿಯವರನ್ನು ಸಂಪರ್ಕಿಸಿದ್ದರು.ಶವವನ್ನು ನೋಡಿದ್ದ ಟೈಲರ್ ಸುಭಾಶ್ಚಂದ್ರ ಅವರು ‘ಇದು ಬಡ್ಡಿ ವಿಶ್ವಣ್ಣ’ ಎಂದು ಹೇಳಿದ್ದರು.

ಪಂಚಮಿ ವಿಶ್ವನೂ ನಾಪತ್ತೆ
ಆದರೆ, ವಿಶ್ವನಾಥ ರೈಯವರನ್ನು ಯಾರು ಕೊಲೆ ಮಾಡಿರಬಹುದು, ಯಾಕೆ ಮಾಡಿರಬಹುದು ಎಂದು ಗೊತ್ತಾಗಿರಲಿಲ್ಲ.ಈ ವೇಳೆ, ಮೃತ ವಿಶ್ವನಾಥ ರೈಯವರ ಆಪ್ತ ಸ್ನೇಹಿತ ಮಾತ್ರವಲ್ಲದೆ,ವಿಶ್ವನಾಥ ರೈಯವರ ಉಪ್ಪಿನಂಗಡಿಯ ಶಿವ ಫೈನಾನ್ಸ್‌ನಲ್ಲಿ ಮೆನೇಜರ್ ಆಗಿದ್ದ ಕೋಡಿಂಬಾಡಿಯ ವಿಶ್ವನಾಥ ಶೆಟ್ಟಿಯೂ ನಾಪತ್ತೆಯಾಗಿದ್ದರು.ವಿಶ್ವನಾಥ ರೈ ಜತೆ ವಿಶ್ವನಾಥ ಶೆಟ್ಟಿಯವರನ್ನೂ ಕೊಲೆ ಮಾಡಿರಬಹುದೇ ಅಥವಾ ಅವರೇ ಈ ಕೊಲೆ ನಡೆಸಿ ಪರಾರಿಯಾಗಿರಬಹುದೇ ಎಂದು ಪೊಲೀಸರಲ್ಲಿ ಗೊಂದಲ ಉಂಟಾಗಿತ್ತು.

ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮಂಗಳೂರು ಸಮೀಪದ ಕದ್ರಿ ಬಳಿ ಅನಾಥ ಸ್ಥಿತಿಯಲ್ಲಿ ಮಾರುತಿ ಝೆನ್ ಕಾರು ಇರುವುದು ಕಂಡು ಬಂದಿತ್ತು.ಕಾರಿನಲ್ಲಿ ರಕ್ತದ ಕಲೆಗಳಿದ್ದವು.ಈ ಕಾರು ಯಾರದ್ದು ಎಂದು ಹುಡುಕಾಟದಲ್ಲಿದ್ದ ಪೊಲೀಸರು ಆರ್‌ಟಿಓ ಅಧಿಕಾರಿಗಳ ಮೂಲಕ ಶೋಧ ನಡೆಸಿದಾಗ ಈ ಕಾರಿನ ಮೂಲ ವಾರಸುದಾರರು ಪತ್ತೆಯಾಗಿದ್ದರಲ್ಲದೆ, ತಾನು ಈ ಕಾರನ್ನು ವಿಶ್ವನಾಥ ಶೆಟ್ಟಿಯವರಿಗೆ ಮಾರಾಟ ಮಾಡಿರುವುದಾಗಿ ಅವರು ತಿಳಿಸಿದ್ದರು.

ಕೊಲೆಗೂ ವಿಶ್ವನಾಥ ಶೆಟ್ಟಿಗೂ ನಂಟು ಇದೆ ಎಂದು ಖಚಿತಪಡಿಸಿಕೊಂಡಿದ್ದ ಅಂದಿನ ಪ್ರಭಾರ ಎ.ಎಸ್.ಪಿ. ಹರ್ಡಿ ಹಾಗು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅಂದು ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ಎನ್.ಬಿ. ಕಮಲ್ ನೇತೃತ್ವದ ಪೊಲೀಸ್ ತಂಡ ತನಿಖೆ ಮುಂದುವರಿಸಿ ವಿಶ್ವನಾಥ ಶೆಟ್ಟಿಗಾಗಿ ಶೋಧ ನಡೆಸಿತ್ತು.ಆದರೆ, ಕೊಲೆ ನಡೆದು ೧೩ ವರ್ಷ ಕಳೆದರೂ ಆರೋಪಿ ವಿಶ್ವನಾಥ ಶೆಟ್ಟಿ ಪತ್ತೆಯಾಗಿರಲಿಲ್ಲ.

ಬಡ್ಡಿ ವಿಶ್ವನಾಥ ರೈಯವರು ಕೊಲೆಯಾಗಿದ್ದಲ್ಲದೆ ಪಂಚಮಿ ವಿಶ್ವನಾಥ ಶೆಟ್ಟಿ ನಾಪತ್ತೆಯಾಗಿದ್ದ ಮಾಹಿತಿ ಹರಡುತ್ತಿದ್ದಂತೆಯೇ ವಿಶ್ವನಾಥರ ಫೈನಾನ್ಸ್‌ನಲ್ಲಿ ಸಾಲ ವಸೂಲಿಗಾರನಾಗಿದ್ದ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಪೆರಿಕೆ ಅಂತ್ರಾಯ ನಿವಾಸಿ ಸುಭಾಶ್ಚಂದ್ರ ಗೌಡರು ಪೊಲೀಸರ ಎದುರು ಹಾಜರಾಗಿ ಮಾಹಿತಿ ನೀಡಿದ್ದರು.

ಬೆಳ್ತಂಗಡಿಯ ನ್ಯಾಯವಾದಿಯೋರ್ವರ ಮುಖಾಂತರ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದ ಸುಭಾಶ್ಚಂದ್ರ ಗೌಡರು, ಸೂತ್ರಬೆಟ್ಟು ವಿಶ್ವನಾಥ ರೈಯವರನ್ನು ಕೋಡಿಂಬಾಡಿಯ ವಿಶ್ವನಾಥ ಶೆಟ್ಟಿಯವರು ಕೊಲೆ ನಡೆಸಿದ್ದಾರೆ ಎಂದು ಹೇಳಿಕೆ ನೀಡಿದ್ದರು.ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಭಿನ್ನಾಬಿಪ್ರಾಯ ಹೊಂದಿದ್ದ ಅವರ ನಡುವೆ ವಾಗ್ವಾದ ನಡೆದು ಬಳಿಕ ಶೆಟ್ಟಿಯವರು ರೈಯವರ ತಲೆಗೆ ರಾಡ್‌ನಿಂದ ಹೊಡೆದು ಕೊಲೆ ಮಾಡಿ ಬಳಿಕ ಕಾರಿನಲ್ಲಿ ಶವವನ್ನು ಕೊಂಡು ಹೋಗಿದ್ದಾರೆ.ಮಾತ್ರವಲ್ಲದೆ ಕೊಲೆ ನಡೆಸಿದ್ದನ್ನು ಯಾರಿಗಾದರೂ ಹೇಳಿದರೆ ನಿನ್ನನ್ನೂ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ.ಇದರಿಂದ ಹೆದರಿದ ನಾನು ಈ ಪ್ರಕರಣವನ್ನು ತಿಳಿಸಲು ಹಿಂದೇಟು ಹಾಕಿದೆ ಎಂದು ಅಂದು ಸುಭಾಶ್ಚಂದ್ರ ಗೌಡರು ಹೇಳಿಕೆ ನೀಡುತ್ತಿದ್ದಂತೆಯೇ ವಿಶ್ವನಾಥ ಶೆಟ್ಟಿಗಾಗಿ ಪೊಲೀಸರು ಬಲೆ ಬೀಸಿದ್ದರು.

Leave A Reply

Your email address will not be published.