‘ಶಾಲೆಯಲ್ಲಿ ಮೊಟ್ಟೆ ತಿನ್ನುವುದಕ್ಕೆ ವಿರೋಧ ಮಾಡಿದ್ರೆ, ನಿಮ್ಮ ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ’ ಎಂದ ಬಾಲಕಿ!! | ಮಠಾಧೀಶರು ಗಳಿಗೆ ಈ ರೀತಿ ತಾಕೀತು ಮಾಡಿರುವ ವಿದ್ಯಾರ್ಥಿನಿಯ ವೀಡಿಯೋ ವೈರಲ್
ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದಲ್ಲಿ ಮೊಟ್ಟೆ ನೀಡುವ ವಿಚಾರ ರಾಜ್ಯದಲ್ಲಿ ಹೊಸ ಬಿಸಿ ಬಿಸಿ ಚರ್ಚೆಯೊಂದಕ್ಕೆ ನಾಂದಿ ಹಾಡಿದೆ. ಈಗಾಗಲೇ ಈ ಕುರಿತು ಸಾರ್ವಜನಿಕ ವೇದಿಕೆಗಳಲ್ಲಿ ಪರ-ವಿರೋಧದ ಚರ್ಚೆಯಾಗುತ್ತಿದೆ. ಹಲವರು ಮೊಟ್ಟೆ ನೀಡಬೇಕೆಂದು ಹೇಳುತ್ತಿದ್ದರೆ, ಇನ್ನು ಕೆಲವರು ವಿರೋಧಿಸುತ್ತಿದ್ದಾರೆ. ಹಲವು ಮಠಾಧೀಶರು ಮಕ್ಕಳಿಗೆ ಮೊಟ್ಟೆ ವಿತರಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಈ ಮಧ್ಯೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ವಿದ್ಯಾರ್ಥಿನಿಯೊಬ್ಬಳು ಮಾಧ್ಯಮದಲ್ಲಿ ಈ ಕುರಿತು ಹೇಳಿಕೆ ನೀಡಿರುವುದು ಬಹಳ ಸುದ್ದಿಯಾಗುತ್ತಿದೆ. ಮೊಟ್ಟೆ ತಿನ್ನಬೇಡಿ ಎಂದರೆ ಹುಷಾರ್, ನಿಮ್ಮ ಮಠಕ್ಕೆ ಬಂದು ತತ್ತಿ ತಿಂದು ತೋರಿಸ್ತೀವಿ ಎಂದು ವಿದ್ಯಾರ್ಥಿನಿ ಮಠಾಧೀಶರುಗಳಿಗೆ ಸವಾಲು ಹಾಕಿದ್ದಾಳೆ.
ನಮಗೆ ತತ್ತಿ ತಿನ್ನದೆ ಬದುಕಲು ಸಾಧ್ಯವಿಲ್ಲ, ಸತ್ತು ಹೋಗುತ್ತೇವೆ. ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟದಲ್ಲಿ ಮಕ್ಕಳಿಗೆ ಮೊಟ್ಟೆ ಕೊಡಬೇಡಿ, ಬಾಳೆಹಣ್ಣು ಮಾತ್ರ ಕೊಡಿ ಎಂದು ವಿರೋಧ ವ್ಯಕ್ತಪಡಿಸಿದರೆ, ನಿಮ್ಮ ಮಠಗಳಿಗೆ ಬಂದು ತಿಂದು ತೋರಿಸ್ತೀವಿ ನೋಡ್ತಿರಿ ಎಂದು ವಿದ್ಯಾರ್ಥಿನಿ ಆವಾಜ್ ಹಾಕಿರುವುದು ಭಾರೀ ವೈರಲ್ ಆಗಿದೆ.
ನಾವು ಒಂದಲ್ಲ ಎರಡು ಮೊಟ್ಟೆ ತಿಂತೀವಿ. ಅದನ್ನು ಕೇಳಲು ನೀವು ಯಾರು ಎಂದು ವಿದ್ಯಾರ್ಥಿನಿ ಪ್ರಶ್ನಿಸಿದ್ದಾಳೆ. ಅಲ್ಲದೇ ನಿಮ್ಮ ಮಠಕ್ಕೆ ಸ್ನಾನ ಮಾಡಿ ಬಂದು ಪೂಜೆ ಮಾಡಿಲ್ವಾ? ನಿಮಗೆ ದಕ್ಷಿಣೆ ಹಾಕಿಲ್ವಾ ಎಂದು ಪ್ರಶ್ನಿಸಿದ ವಿದ್ಯಾರ್ಥಿನಿ, ನಾವು ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾಳೆ. ಇದೀಗ ಈ ವಿದ್ಯಾರ್ಥಿನಿಯ ಹೇಳಿಕೆಯ ವೀಡಿಯೋ ಫುಲ್ ವೈರಲ್ ಆಗಿದೆ.
ಶುದ್ಧ ಸಸ್ಯಹಾರಿಯಾಗಿರುವ ಮಠಗಳ ಕುರಿತು ಈ ರೀತಿಯ ಅಪವಿತ್ರತೆಯ ಮಾತುಗಳನ್ನಾಡಿದ್ದು ಮಕ್ಕಳಿಗೆ ಶೋಭೆ ತರುವಂತದ್ದಲ್ಲ. ಈ ರೀತಿ ಹೇಳಿಕೆ ನೀಡಲು ಆಕೆಗೆ ಯಾರಾದರೂ ಪ್ರಚೋದನೆ ನೀಡಿದ್ದಾರೆಯೇ ಎಂಬ ಅನುಮಾನ ಹಲವರಲ್ಲಿ ಮೂಡಿದ್ದಂತೂ ಸತ್ಯ.