ಸಮೃದ್ಧ ಯಕ್ಷಗಾನ ಕಲೆಯ ಮಕುಟಕ್ಕೊಂದು ಸಂಪ್ರೀತಿಯ ಮಣಿ ಶ್ರೀರಕ್ಷಾ ಭಟ್, ಕಳಸ
ಯಕ್ಷಗಾನ ಕಲೆಯನ್ನು ಅಭಿಜಾತ, ಶಾಸ್ತ್ರೀಯ, ಅರೆಶಾಸ್ತೃೀಯ, ಜಾನಪದ, ದೇಸಿ, ಮಾರ್ಗ ಎಂಬುದಾಗಿ ಪರಿಣತರೆಲ್ಲ ಬೇರೆ ಬೇರೆಯಾಗಿ ವ್ಯಾಖ್ಯಾನಿಸುತ್ತಾರೆ. ವಿಶ್ವಮಾನ್ಯ ವಿದ್ವಾಂಸರಾದ ಶತಾವಧಾನಿ ಡಾ. ಆರ್. ಗಣೇಶ್ ಅವರು "ಯಕ್ಷಗಾನ ಮಾರ್ಗ ಶೈಲಿಯ ದೇಸಿಯ ಕಲೆ" ಎಂದು ಅಭಿಪ್ರಾಯ ಪಡುತ್ತಾರೆ. ಯಕ್ಷಗಾನ ಕರಾವಳಿ ಕರ್ನಾಟಕದ ಒಂದು ಸಮೃದ್ಧ ಹಾಗೂ ಪರಿಪೂರ್ಣ ಪ್ರಾಚೀನ ಕಲೆ. ಯಕ್ಷಗಾನದ ಪ್ರಾಚೀನತೆಯ ಕುರಿತು ಅಧಿಕೃತವಾಗಿ ಅಭಿನವ ನಾಗವರ್ಮ ಎಂದೆಣಿಸಿರುವ ಡಾ. ಎನ್. ನಾರಾಯಣ್ ಶೆಟ್ಟಿ, ಶಿಮಂತೂರು ಹೀಗೆ ಹೇಳುತ್ತಾರೆ.
“ಯಕ್ಷಗಾನ ಎಂಬ ಸಾಹಿತ್ಯ ಪ್ರಭೇದ ಸರಿ ಸುಮಾರು ಆರು, ಏಳನೆಯ ಶತಮಾನದ ಆರಂಭದಲ್ಲೇ ಜನರ ಬಾಯಲ್ಲಿತ್ತು”. ಮುಂದುವರಿದು ಯಕ್ಷಗಾನದ ಕಲಾತ್ಮಕತೆಯ ಕುರಿತಾಗಿ ಹೀಗೆ ಪ್ರತಿಕ್ರಿಯಿಸುತ್ತಾರೆ. “ಯಕ್ಷಗಾನ ಸಾಹಿತ್ಯ ಪ್ರಕಾರಗಳು ಸಾರಸ್ವತ ಸೌಂದರ್ಯಗಳ ಒಂದು ವಿಸ್ಮಯ ಪ್ರಪಂಚ”. ಇಂಥ ಬೆರಗು, ಬೆಡಗು,ಸೊಗಡುಗಳಿಂದ ಮೋಡಿಗೊಳಿಸುವ ವಿಸ್ಮಯ ಪ್ರಪಂಚದ ಯಕ್ಷಗಾನದ ಸನಿಯದಲ್ಲಿ ಒಡನಾಡಿದರೂ ಕೂಡ ಮೈನವಿರೇಳಿಸುತ್ತದೆ. ಹಾಗಿರುವಾಗ ಅದನ್ನು ಕ್ರಮಬದ್ಧ, ಶಾಸ್ತ್ರಬದ್ಧವಾಗಿ
ಗುರುಮುಖೇನ ಕಲಿತು ಅರಗಿಸಿಕೊಂಡವರಿಗೆ ವಿಸ್ಮಯ ಪ್ರಪಂಚದಲ್ಲಿ ನಿತ್ಯ ವಿಹರಿಸುವ ಸುಖ. ಕಲಿತಷ್ಟೂ ಕಲಿಯಲಿರುವ ಹಾಗೂ ಮೊಗೆದಷ್ಟೂ ನವ ನವೀನತೆಯ ಅವಿಷ್ಕಾರಗಳ ಆಗರ ಯಕ್ಷಗಾನ. ಮನೆತನದಲ್ಲಿಯೇ ಯಕ್ಷಗಾನ ಹಾಸುಹೊಕ್ಕಾಗಿದ್ದರೆ ಮುಂದಿನ ಪೀಳಿಗೆಗೆ ರಕ್ತಗತವಾಗುವುದು ಸರಳ ಹಾಗೂ ಸಹಜ. ಶ್ರೀರಕ್ಷಾ ಭಟ್, ಕಳಸ ಅವರು ಇಂಥ ವಾತಾವರಣದಿಂದ ಬಂದವರು.
ಕೌಟುಂಬಿಕ ಹಿನ್ನೆಲೆ: ಶ್ರೀರಕ್ಷಾ ಅವರ ತಾಯಿ ಶ್ರೀಮತಿ ಜ್ಯೋತಿ ಭಟ್ ಅವರ ತವರೂರು ಸುರತ್ಕಲ್ ಸಮೀಪದ ಕಾಟಿಪಳ್ಳ. ಜ್ಯೋತಿ ಭಟ್ ಅವರ ತೀರ್ಥರೂಪರು ದಿವಂಗತ ಕೃಷ್ಣ ರಾವ್ ಅವರು ಹವ್ಯಾಸಿ ಭಾಗವತರು. ಸುರತ್ಕಲ್ ಹಾಗೂ ಹಾಸುಪಾಸಿನಲ್ಲಿ ನಿತ್ಯ ನಿರಂತರ ಯಕ್ಷಗಾನ ನಡೆಯುತ್ತಿರುತ್ತದೆ. ಮನೆಯ ಮತ್ತು ಪರಿಸರದ ಸಾಂಗತ್ಯದಿಂದ ಜ್ಯೋತಿ ಭಟ್ ಅವರು ಬಾಲ್ಯದಲ್ಲಿಯೇ ಯಕ್ಷಗಾನದಿಂದ ಆಕರ್ಷಿತರಾದವರು. ಶ್ರೀ ಶಿವರಾಮ ಪಣಂಬೂರು, ಶ್ರೀ ರಮೇಶ್ ಶೆಟ್ಟಿ, ಬಾಯಾರು ಇವರುಗಳಿಂದ ಯಕ್ಷಹೆಜ್ಜೆಗಳನ್ನು ಕಲಿತರೆ ಖ್ಯಾತ ಭಾಗವತರಾದ ಶ್ರೀಮತಿ ಲೀಲಾವತಿ ಬೈಪಡಿತ್ತಾಯ ಅವರಿಂದ ಭಾಗವತಿಕೆಯನ್ನು ಕಲಿತವರು. ಶ್ರೀಮಹಾ ಗಣಪತಿ ಮಹಿಳಾ ಯಕ್ಷಗಾನ ತಂಡ ಬಾಳ, ಕಾಟಿಪಳ್ಳ ಮೇಳದಲ್ಲಿ ಐದಾರು ವರ್ಷ ವಿವಿಧ ಪ್ರಸಂಗಗಳಲ್ಲಿ ನೂರಾರು ಪಾತ್ರ ಮಾಡಿದ ಅನುಭವಿ ಕಲಾವಿದೆ. ಪರಿಣಯವಾಗಿ ಪತಿಯೊಂದಿಗೆ ಪಯಣಿಸಿದ್ದು ಪ್ರಕೃತಿ ಸೌಂದರ್ಯದ ಮಡಿಲು ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಹಳ್ಳುವಳ್ಳಿ. ಪತಿ ಶ್ರೀ ನಾರಾಯಣ ಅವರು ಯಕ್ಷಗಾನದ ಹಿನ್ನೆಲೆಯವರಲ್ಲದಿದ್ದರೂ ಯಕ್ಷಕಲಾ ರಸಿಕರು. ಮಡದಿಯ ಯಕ್ಷನಡೆಗೆ ತಾನೂ ಜೊತೆಯಾಗಿ ನಡೆದವರು. ಆದ್ದರಿಂದ ಜ್ಯೋತಿ ಅವರು ನೂರಾರು ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಯಕ್ಷಗಾನದ ಹಿಮ್ಮೇಳ ಹಾಗೂ ಮುಮ್ಮೇಳದ ಕಲಿಕೆಯನ್ನು ಕಲಿಸುತ್ತ ಬಂದವರು.
ಶ್ರೀರಕ್ಷಾ ಭಟ್ ಅವರು ಹುಟ್ಟುತ್ತಲೇ ಮನೆಯಲ್ಲಿ ಯಕ್ಷಗುಂಜನ ಅನುರಣಿಸುತ್ತ ಇತ್ತು. ತಾಯಿ ನಡೆಸುತ್ತಿದ್ದ ತರಗತಿಗಳಲ್ಲಿ ಹೆತ್ತವರ ಆಕ್ಷೇಪಣೆಯ ಹೊರತಾಗಿಯೂ ನಿಯಮಿತವಾಗಿ ಹಾಜರಿ ಇತ್ತವರು. ತಾಯಿಯವರ ಪ್ರಾಯೋಜಕತ್ವದ "ಶ್ರೀಕುಮಾರ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಹಳುವಳ್ಳಿ ಮಹಿಳಾ ಮತ್ತು ಮಕ್ಕಳ ತಂಡದಲ್ಲಿ ಪ್ರಥಮ ಬಾರಿಗೆ ಗೆಜ್ಜೆ ಕಟ್ಟಿ ದೇವೇಂದ್ರನ ಪಾತ್ರಕ್ಕಾಗಿ ಯಕ್ಷ ಹೆಜ್ಜೆ ಹಾಕಿದವರು. ಆಗ ಶ್ರೀರಕ್ಷಾ ಅವರು ನಾಲ್ಕರ ಮುಗುದೆ. ಮೂಡಿಗೆರೆ ಬಸ್ರಿಕಟ್ಟೆ ಶ್ರೀಸದ್ಗುರು ಆಂಗ್ಲ ಮಾಧ್ಯಮದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದವರು.
ಆಗಲೂ ಯಕ್ಷ ಹೆಜ್ಜೆಯನ್ನು ದೃಢಗೊಳಿಸುತ್ತ ನಡೆದವರು. ಪದವಿ ಪೂರ್ವ ಶಿಕ್ಷಣಕ್ಕಾಗಿ ಆಳ್ವಾಸ್ ಸಂಸ್ಥೆಯನ್ನು ಸೇರಿದರು. ಮಿತ ಹರವಿನ ಮೂಡಿಗೆರೆಗೂ ಅಮಿತ ವಿಸ್ತಾರದ ಮೂಡಬಿದಿರೆಗೂ ಅಜಗಜಾಂತರವನ್ನು ಕಂಡರು. ಏಕೆಂದರೆ ಆಳ್ವಾಸ್ ಸಂಸ್ಥೆಯಲ್ಲಿ ಯಕ್ಷಗಾನ ಪ್ರಶಿಕ್ಷಣಕ್ಕೆ ಪ್ರತ್ಯೇಕ ವ್ಯವಸ್ಥೆ ಹಾಗೂ ಪ್ರತಿಭಾ ಪ್ರದರ್ಶನಗಳಿಗೆ ಸಾಗರ ವ್ಯಾಪ್ತಿಯ ಅವಕಾಶಗಳಿವೆ.
ಪ್ರಸ್ತುತ ದ್ವಿತೀಯ ಪದವಿ ಪೂರೈಸಿರುವ ಶ್ರೀರಕ್ಷಾ ಭಟ್ ಅವರು ಈವರೆಗೆ ನಾಲ್ಕು ನೂರರಷ್ಟು ಪಾತ್ರಗಳಿಗೆ ಗೆಜ್ಜೆ ಕಟ್ಟಿದವರು. ಎಲ್ಲಾ ಪಾತ್ರಗಳನ್ನು ಸಮಾನವಾಗಿ ಪ್ರೀತಿಸುವ ಅವರು ವೀರ ರಸದ ಪುಂಡು ವೇಷ, ಪುರುಷ ವೇಷಗಳನ್ನೇ ಹೆಚ್ಚಾಗಿ ನಿರ್ವಹಿಸಿದವರು. ಲಾಸ್ಯದ ಸ್ತ್ರೀ ವೇಷ ಹಾಗೂ ಹಾಸ್ಯದ ಪಾತ್ರಗಳನ್ನು ಇನ್ನು ಹೆಚ್ಚಾಗಿ ಮಾಡಬೇಕೆಂಬ ಇಚ್ಛೆಯನ್ನು ವ್ಯಕ್ತ ಪಡಿಸುತ್ತಾರೆ. ಯಕ್ಷಗಾನದ ಹಿಮ್ಮೇಳವನ್ನೂ ಕಲಿಯುವತ್ತಲೂ ಮನ ಮಾಡಿದ್ದಾರೆ. ಆರಂಭದಲ್ಲಿ ತಾಯಿಯನ್ನೇ ಗುರುವಾಗಿಸಿಕೊಂಡವರು ನಂತರ ದಿನಕರ್ ಪಚ್ಚನಾಡಿ, ರಮೇಶ್ ಶೆಟ್ಟಿ ಬಾಯಾರು ಹಾಗೂ ಜಿ. ಕೆ. ನಾವಡ ಬಾಯಾರು ಇವರಿಂದ ಪ್ರೌಢ ಮಟ್ಟದ ಯಕ್ಷ ಶಿಕ್ಷಣವನ್ನು ಪಡೆದವರು. ಶ್ರೀದೇವಿ, ಸುದರ್ಶನ, ಬಭ್ರುವಾಹನ, ಸುಧನ್ವ, ಕೃಷ್ಣ ಇವರ ಇಚ್ಛಿತ ವೇಷಗಳು. ತಾಯಿಯೊಂದಿಗೆ ದ್ವಂದ್ವ ಪಾತ್ರಗಳನ್ನೂ ನಿರ್ವಹಿಸಿದ್ದಾರೆ. ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನ ಹಳುವಳ್ಳಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತೆ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಅವರ ಯಕ್ಷ ತಂಡ ಹಾಗೂ ಅನೇಕ ಹವ್ಯಾಸಿ ಯಕ್ಷ ತಂಡಗಳಲ್ಲಿ ಅಭಿನಯಿಸಿದ ಅನುಭವಿ ಕಲಾವಿದೆ ಶ್ರೀರಕ್ಷಾ ಭಟ್.
ಪ್ರಚಾರದಿಂದ ದೂರವಿರುವ ಶ್ರೀರಕ್ಷಾ ಅವರ ಕುರಿತಾಗಿ ಕೆಲವೊಂದು ಲೇಖನಗಳು ಪ್ರಕಟವಾಗಿವೆ. ಯಕ್ಷ ಕಲಾವಿದೆ ಆಜ್ಞಾ ಸೋಹಮ್ ಅವರು 'ಬಲ್ಲಿರೇನಯ್ಯ' ಪತ್ರಿಕೆಯಲ್ಲಿ ಪರಿಚಯಾತ್ಮಕ ಲೇಖನವನ್ನು ಬರೆದು ಪ್ರಕಟಿಸಿದ್ದಾರೆ. ನಮ್ಮ ಕುಡ್ಲ 24 x 7 ವಾಹಿನಿಯ 'ಯುವ ಸೃಷ್ಟಿ' ಕಾರ್ಯಕ್ರಮದಲ್ಲಿ ವಿಸ್ತೃತವಾದ ಸಂದರ್ಶನ ಪ್ರಸಾರವಾಗಿದೆ. ಯಕ್ಷಗಾನದಂತೆ ನಾಟಕದಲ್ಲೂ ಆಸಕ್ತರಾಗಿರುವ ಶ್ರೀರಕ್ಷಾ ಅವರು ಪಠ್ಯ ಶಿಕ್ಷಣದಲ್ಲಿಯೂ ಉನ್ನತ ಸ್ಥಾನವನ್ನು ಕಾಯ್ದುಕೊಂಡು ಬಂದವರು. ಅವರ ಭವಿತವ್ಯದ ಬದುಕು ಉಜ್ವಲವಾಗಲಿ ಎಂಬ ಹಾರೈಕೆ ನಮ್ಮದು.
ಲೇಖನ : ಉದಯ ಶೆಟ್ಟಿ, ಪಂಜಿಮಾರು