ಬೈಕ್ ಗೆ ಢಿಕ್ಕಿ ತಪ್ಪಿಸಲು ಹೋಗಿ, ಇಬ್ಬರು ವಿದ್ಯಾರ್ಥಿನಿಯರಿಗೆ ಗುದ್ದಿದ ಗೂಡ್ಸ್ ಗಾಡಿ: ವಿಡಿಯೋ ವೈರಲ್

ಶಿವಮೊಗ್ಗ: ಬೈಕ್ ಗೆ ಆಗಬಹುದಾದ ಸಂಭಾವ್ಯ ಢಿಕ್ಕಿ ತಪ್ಪಿಸಲು ಹೋದ ಗೂಡ್ಸ್ ಗಾಡಿ ಚಾಲಕ ರಸ್ತೆ ಮೇಲೆ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಗುದ್ದಿರುವ ಘಟನೆ ಶನಿವಾರ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಿಎಚ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.ಅಲ್ಲಿನ ಬಿಎಚ್ ರಸ್ತೆಯಲ್ಲಿನ ಸುಜುಕಿ ಶೋರೂಂ ಬಳಿಯ ರಸ್ತೆಯಲ್ಲಿ ವಿದ್ಯಾರ್ಥಿನಿಯರು ನಡೆದುಕೊಂಡು ಹೋಗುತ್ತಿದ್ದಾಗ ಪಕ್ಕದ ರಸ್ತೆಯಿಂದ ವೇಗವಾಗಿ ಬಂದ ಗೂಡ್ಸ್ ಗಾಡಿ ಬೈಕ್ ಗೆ ಆಗಬಹುದಾಗಿದ್ದ ಢಿಕ್ಕಿ ತಪ್ಪಿಸಲು ನೇರವಾಗಿ ನುಗ್ಗಿದೆ.
ಆಗ ಅಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಗೂಡ್ಸ್ ಗಾಡಿ ಹರಿದಿದೆ.

ಓರ್ವ ಯುವತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮತ್ತೋರ್ವ ಯುವತಿ ಸ್ಥಿತಿ ಗಂಭೀರವಾಗಿದೆ. ಗಾಯಾಳು ವಿದ್ಯಾರ್ಥಿನಿಯರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಉಪ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಪರಿಶೀಲನೆ ನಡೆಸಿದರು. ಅಲ್ಲದೆ ಅಪಘಾತ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave A Reply

Your email address will not be published.