ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆ ,ಸ್ಥಳೀಯ ಸಂಸ್ಥೆಗಳ ಸಾಮಾನ್ಯ ಸಭೆ,ಗ್ರಾಮ ಸಭೆ,ಗುದ್ದಲಿ ಪೂಜೆ,ಉದ್ಘಾಟನೆಗೆ ನಿರ್ಬಂಧ

ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ.

ರಾಜ್ಯದ ಒಟ್ಟು 25 ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 14ರಂದು ಫಲಿತಾಂಶ
ಪ್ರಕಟವಾಗಲಿದೆ. ನವೆಂಬರ್ 16ರಂದು ಚುನಾವಣೆಗೆ
ಅಧಿಸೂಚನೆ ಪ್ರಕಟವಾಗಲಿದ್ದು, ನವೆಂಬರ್ 23ರಂದು
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನವೆಂಬರ್24 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು,ನವೆಂಬರ್ 26 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಡಿಸೆಂಬರ್ 10ರಂದು ಬೆಳಗ್ಗೆ 8 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ.

ದಕ್ಷಿಣ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಕೋಲಾರ, ಕೊಡಗು ಮತ್ತು ಮೈಸೂರು ಸ್ಥಳೀಯ ಸಂಸ್ಥೆಗಳ ನಡೆಯಲಿದೆ. ವಿಧಾನಪರಿಷತ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ವಿಧಾನ ಪರಿಷತ್‌ನ ಸಭಾನಾಯಕ, ಸಚಿವರೂ ಆಗಿರುವ ಬಿಜೆಪಿ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಭಾ ನಾಯಕರಾದ ಕಾಂಗ್ರೆಸ್ ಮುಖಂಡ ಪ್ರತಾಪ್‌ಚಂದ್ರ ಶೆಟ್ಟಿ ಸೇರಿದಂತೆ ವಿಧಾನ ಪರಿಷತ್‌ನ 25 ಸದಸ್ಯರ ಅಧಿಕಾರ ಅವಧಿ ಜ.5ಕ್ಕೆ ಕೊನೆಗೊಳ್ಳಲಿದೆ. ಇವರ ಅಧಿಕಾರವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆಗೆ ದಿನಾಂಕ ನಿಗದಿಗೊಳಿಸಿ ಚುನಾವಣೆ ಘೋಷಿಸಲಾಗಿದೆ.

ಈ ಚುನಾವಣೆಗೆ ಜಿ.ಪಂ, ತಾ.ಪಂ., ಗ್ರಾ.ಪಂ., ನಗರಸಭೆ, ಪುರಸಭೆ, ನಗರ ಪಂಚಾಯತ್, ಪಟ್ಟಣ ಪಂಚಾಯತ್, ನಗರ ಪಾಲಿಕೆಯ ಚುನಾಯಿತ ಜನಪ್ರತಿನಿಧಿಗಳು ಮತದಾರರು ಆಗಿರುತ್ತಾರೆ. ಪ್ರಸ್ತುತ ಜಿ.ಪಂ. ಮತ್ತು ತಾ.ಪಂ. ಸದಸ್ಯರ ಆಡಳಿತಾವಧಿ ಮುಕ್ತಾಯಗೊಂಡಿದೆ. ಆದ್ದರಿಂದ ಈ ವಿಧಾನ ಪರಿಷತ್ ಚುನಾವಣೆಗೆ ಜಿ.ಪಂ. ಮತ್ತು ತಾ.ಪಂ. ಸದಸ್ಯರ ಮತ ಚಲಾವಣೆ ಇರುವುದಿಲ್ಲ.

ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು ಪುತ್ತೂರು ನಗರಸಭೆ, ಕಡಬ ಪಟ್ಟಣ ಪಂಚಾಯತ್ ಮತ್ತು ಪುತ್ತೂರು, ಕಡಬ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತಿಗಳ ಸಹಿತ ರಾಜ್ಯದ ಸ್ಥಳೀಯ ಸಂಸ್ಥೆಗಳ ಸಾಮಾನ್ಯ ಸಭೆ, ವಾರ್ಡ್‌ಸಭೆ, ಗ್ರಾಮ ಸಭೆಗಳನ್ನು ಮುಂದೂಡಲಾಗಿದೆ. ಶಂಕು ಸ್ಥಾಪನೆ, ಉದ್ಘಾಟನೆ ಮುಂತಾ ಕಾರ್ಯಕ್ರಮಗಳಿಗೂ ನಿರ್ಬಂಧ ಇರಲಿದೆ.

Leave A Reply

Your email address will not be published.