ದ.ಕ ,ಉಡುಪಿ : 2 ವಿಧಾನ ಪರಿಷತ್ ಸ್ಥಾನದ ಚುನಾವಣೆಗೆ ಕಣ ಸಿದ್ದ | ಕಾಂಗ್ರೆಸ್ ನಿಂದ 11 ಜನ ಆಕಾಂಕ್ಷಿಗಳು, ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡ ಸ್ಥಳೀಯಾಡಳಿತ ಸಂಸ್ಥೆ ಚುನಾವಣಾ ಕ್ಷೇತ್ರದಿಂದ ವಿಧಾನಪರಿಷತ್‌ನ ಎರಡು ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಿಗದಿಯಾಗಿರುವ ಹಿನ್ನಲೆಯಲ್ಲಿ ಉಭಯ ರಣಕಣ ಸಿದ್ದವಾಗುತ್ತಿದೆ.
ಪರಿಷತ್‌ನ 25 ಸ್ಥಾನಗಳು ಜ. 5ಕ್ಕೆ ತೆರವಾಗ ಲಿವೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಪ್ರತಾಪಚಂದ್ರ ಶೆಟ್ಟಿ ಅವರು 2016ರ ಜನವರಿ 6ರಂದು ನಡೆದಿದ್ದ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು.
ಕಾಂಗ್ರೆಸ್‌ನಲ್ಲಿ 11 ಆಕಾಂಕ್ಷಿಗಳು
ಕಾಂಗ್ರೆಸ್‌ನಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 11 ಸ್ಪರ್ಧಾಕಾಂಕ್ಷಿಗಳಿದ್ದಾರೆ. ದ.ಕ.ದಿಂದ ಕೆಪಿಸಿಸಿ ಮಾಜಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಎಐಸಿಸಿ ಕಾರ್ಯದರ್ಶಿಗಳಾದ ಪಿ.ವಿ. ಮೋಹನ್, ಐವನ್ ಡಿ’ಸೋಜಾ, ಕಾವು ಹೇಮನಾಥ ಶೆಟ್ಟಿ, ವಿವೇಕರಾಜ್ ಪೂಜಾರಿ ಸೇರಿದಂತೆ 8 ಮಂದಿ ಹಾಗೂ ಉಡುಪಿಯಿಂದ ಜಿ.ಪಂ. ಮಾಜಿ ಸದಸ್ಯ ಮಂಜುನಾಥ ಪೂಜಾರಿ, ಮಹಿಳಾ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷೆ ಶ್ಯಾಮಲಾ ಭಂಡಾರಿ, ಯೋಗೀಶ್ ಶೆಟ್ಟಿ ಅರ್ಜಿ ಸಲ್ಲಿಸಿದ್ದಾರೆ.
ಬಿಜೆಪಿಯಿಂದ ವಿಧಾನಪರಿಷತ್ ಸದಸ್ಯರಾಗಿರುವ ಸಚಿವ ಹಾಗೂ ವಿಧಾನ ಪರಿಷತ್ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರ ಹೆಸರೇ ಅಂತಿಮ ಎನ್ನಲಾಗಿದೆ.
ದ.ಕ.-ಉಡುಪಿ ಸ್ಥಳೀಯಾಡಳಿತ ಕ್ಷೇತ್ರ ಎರಡು ಸ್ಥಾನಗಳನ್ನು ಹೊಂದಿದೆ. ಪ್ರಾಶಸ್ತ್ಯ ಮತಗಳ ಆಧಾರದಲ್ಲಿ ಜಯ ನಿರ್ಧಾರವಾಗಲಿದೆ. 6,500ಕ್ಕೂ ಅಧಿಕ ಮತದಾರರನ್ನು ಹೊಂದಿದೆ. ಆದರೆ ಜಿ. ಪಂ., ತಾ.ಪಂ.ಗಳಿಗೆ ಚುನಾವಣೆ ನಡೆಯದಿರುವ ಹಿನ್ನೆಲೆಯಲ್ಲಿ ಸುಮಾರು 300 ಮತ ಕಡಿಮೆಯಾಗಲಿವೆ.ಲೆಕ್ಕಾಚಾರಗಳ ಪ್ರಕಾರ ಬಿಜೆಪಿ,ಕಾಂಗ್ರೆಸ್‌ಗೆ ತಲಾ ಒಂದೊಂದು ಸ್ಥಾನಗಳನ್ನು ಗೆಲ್ಲುವ ಅವಕಾಶವಿದೆ.