ಹೆಬ್ರಿ : ಚರ್ಚ್‌ನ ಧರ್ಮಗುರುವಿನಿಂದ ಭಕ್ತರ ಅವಹೇಳನ |ಪ್ರತಿಭಟನೆ,ನ್ಯಾಯ ಸಿಗದಿದ್ದರೆ ಧರ್ಮ ತ್ಯಜಿಸುವ ಎಚ್ಚರಿಕೆ

ಉಡುಪಿ : ಹೆಬ್ರಿ ತಾಲೂಕಿನ ಬೆಳ್ವೆ ಗುಮ್ಮಹೊಲ ಎಂಬಲ್ಲಿ ಸಂತ ಜೋಸೆಫರ ಚರ್ಚ್ ಧರ್ಮಗುರುವೊಬ್ಬರು ಚರ್ಚ್‌ನ ಭಕ್ತಾಧಿಗಳಿಗೆ ಅವಹೇಳನ ಮಾಡಿ ಶೂಟ್ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಆದಿತ್ಯವಾರ ಚರ್ಚ್‌ನ ಮುಂಭಾಗ ಭಕ್ತರು‌ ಸೇರಿ ನ್ಯಾಯಕ್ಕಾಗಿ ಆಗ್ರಹಿಸಿದ್ದು, ವಾರದೊಳಗೆ ಧರ್ಮಗುರುಗಳ ಬದಲಾವಣೆ ಮಾಡದಿದ್ದಲ್ಲಿ ಪ್ರತಿಭಟನೆ ಜೊತೆಗೆ ಕ್ರೈಸ್ತ ಧರ್ಮ ತ್ಯಜಿಸುವ ಎಚ್ಚರಿಕೆಯನ್ನು ನೀಡಿದರು.

60 ವರ್ಷಗಳ ಇತಿಹಾಸವಿರುವ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಬೆಳ್ವೆ ಗುಮ್ಮಹೊಲದ ಸಂತ ಜೋಸೆಫರ ಚರ್ಚ್‌ಗೆ 3 ತಿಂಗಳ ಹಿಂದೆ ಗುರುಗಳಾಗಿ ಬಂದಿರುವ ಅಲೆಕ್ಸಾಂಡರ್‌ ಲೂವಿಸ್ ಎಂಬವರು ಭಕ್ತಾದಿಗಳಿಗೆ ಅವಹೇಳನ ಮಾಡಿದ್ದಲ್ಲದೆ ಶೂಟ್ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ.ಜತೆಗೆ ಅಧಿಕಾರ ದುರುಪಯೋಗಪಡಿಸಿಕೊಂಡು ಐಷಾರಾಮಿ ಜೀವನ ನಡೆಸುವುದಕ್ಕಾಗಿ ಭಕ್ತರ ಮನಸ್ಸಿಗೆ ನೋವುಂಟು ಮಾಡಿದ್ದಾರೆ ಎಂದು ಭಕ್ತರ ಪರವಾಗಿಪ್ರವೀಣ್ ಲೋಬೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬೆಳವಣಿಗೆ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಗೆ ಚರ್ಚ್‌ನ ಭಕ್ತರು ದೂರು ದಾಖಲಿಸಿದ್ದು, ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅವರಿಗೂ ಮನವಿ ಸಲ್ಲಿಸಲಾಗಿದೆ.

ಧರ್ಮಪ್ರಾಂತ್ಯದ ಆಡಳಿತ ಮಂಡಳಿ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಗುರುಗಳ ಪರವಾಗಿಯೇ ಇದ್ದಾರೆ ಎಂಬ ಆರೋಪ ಕೂಡ ವ್ಯಕ್ತವಾಗಿದೆ.

ಕ್ರೈಸ್ತ ಸಮುದಾಯದ ಪರ ನಿಂತ ಇತರ ಸಮುದಾಯದ ಗ್ರಾಮಸ್ಥರು

ಆದಿತ್ಯವಾರ ನಡೆದ ಖಂಡನಾ‌ಸಭೆಯ ವೇಳೆ ಕ್ರೈಸ್ತಧರ್ಮದ ಭಕ್ತರ ಪರವಾಗಿ ಧರ್ಮಾತೀತವಾಗಿ ಇತರ ಸಮುದಾಯದವರು ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ಸೂಚಿಸಿದರು. ಬೆಳ್ವೆಯಲ್ಲಿ ನಾವೆಲ್ಲರೂ ಸರ್ವಧರ್ಮ ಸಮನ್ವಯತೆ ತತ್ವದಡಿ ಯಾವುದೇ ಜಾತಿ ಧರ್ಮ ಬೇಧವಿಲ್ಲದೆ ಬದುಕುತ್ತಿದ್ದೇವೆ.ಇದೀಗ ಕ್ರೈಸ್ತ ಧರ್ಮದ ಬಂಧುಗಳಿಗೆ ಚರ್ಚ್‌ನಲ್ಲಿ ಆಗಿರುವ ತೊಂದರೆಗೆ ನಾವು ಜತೆಯಾಗಿ ನಿಲ್ಲುತ್ತೇವೆ ಎಂದು ಬೆಳ್ವೆ ಗ್ರಾ.ಪಂ‌ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಸೂರ್ಗೋಳಿ, ಮಾಜಿ ಅಧ್ಯಕ್ಷರಾದ ವೈ. ಕರುಣಾಕರ ಶೆಟ್ಟಿ, ಉದಯ ಪೂಜಾರಿ ಹೇಳಿದರು.

ಖಂಡನಾ ಸಭೆಯಲ್ಲಿ ಚರ್ಚ್‌ನ ಭಕ್ತಾದಿಗಳ ಪರವಾಗಿ ಶಾಂತಿ ಡೇಸಾ, ಸಿಲ್ವಿಯಾ ಪ್ಲೊರೆಸ್, ಸ್ಯಾಂಡ್ರಾ ಸ್ಯಾಮ್ಸನ್, ಪ್ರೇಮ್ ಪ್ಲೊರೆಸ್ ಮೊದಲಾದವರು ಮಾತನಾಡಿದರು.

Leave A Reply

Your email address will not be published.