ಬೆಳ್ತಂಗಡಿ; ದಲಿತ ವಿದ್ಯಾರ್ಥಿನಿಯ ಅತ್ಯಾಚಾರ: ಆರೋಪಿಯ ಅಪರಾಧ ಸಾಬೀತು

Share the Article

ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣವೊಂದರ ಆರೋಪಿಯ ಅಪರಾಧ ಕೃತ್ಯ ಸಾಬೀತಾಗಿದೆ ಎಂದು ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌-1 (ಪೊಕ್ಸ್) ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಬೆಳ್ತಂಗಡಿ ಮೂಲದ ಪಿ.ಜೆ.ಜೇಕಬ್ ಅಲಿಯಾಸ್ ಚಾಕೋಚ ಎಂಬಾತ ಆರೋಪಿ.

ಪ್ರಕರಣ ವಿವರ: 2015ರ ಫೆಬ್ರವರಿಯಲ್ಲಿ ಬೆಳ್ತಂಗಡಿ ತಾಲೂಕಿನ ಗ್ರಾಮವೊಂದರ ದಲಿತ ಸಮುದಾಯದ ಬಾಲಕಿಯೋರ್ವಳು ಶಾಲೆಯಿಂದ ಮನೆಗೆ ಪಿ.ಜೆ.ಜೇಕಬ್ ಅಲಿಯಾಸ್ ಚಾಕೋಚ ಎಂಬಾತನ ಮನೆ ಬಳಿಯ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಈ ವೇಳೆ ಆರೋಪಿ ಜೇಕಬ್ ವಿದ್ಯಾರ್ಥಿನಿಯನ್ನು ತಡೆದು ನಿಲ್ಲಿಸಿ ಬಲಾತ್ಕಾರವಾಗಿ ಮನೆಯೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನದಿಗೆ ಹಾಕಿ ಕೊಲೆ ಮಾಡುವುದಾಗಿ ಬೆದರಿಸಿದ್ದ. ನಂತರ ಕೂಡ ಬಾಲಕಿ ಶಾಲೆಯಿಂದ ಮನೆಗೆ ಬರುವಾಗ ತಡೆದು ಪಕ್ಕದ ರಬ್ಬರ್ ತೋಟಕ್ಕೆ ಬಲಾತ್ಕಾರವಾಗಿ ಕರೆದೊಯ್ದು ಅತ್ಯಾಚಾರವೆಸಗಿ ಬೆದರಿಕೆ ಹಾಕಿದ್ದ. ಇಂತಹ ಕೃತ್ಯ ಹಲವು ಬಾರಿ ನಡೆದಿತ್ತು. ಪರಿಣಾಮ ಬಾಲಕಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಳು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಡಿಎನ್ಎ ಪರೀಕ್ಷೆಯಲ್ಲಿ ಬಾಲಕಿಯ ಗರ್ಭಕ್ಕೆ ಪಿ.ಜೆ.ಜೇಕಬ್ ಎಂಬಾತನೇ ಕಾರಣ ಎಂಬುದು ದೃಢಪಟ್ಟಿತ್ತು. ಎಎಸ್‌ಪಿ ರಾಹುಲ್ ಕುಮಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಧೀಶೆ ಸಾವಿತ್ರಿ ವಿ. ಭಟ್ 14 ಸಾಕ್ಷಿಗಳನ್ನು ವಿಚಾರಣೆ ಮಾಡಿದ್ದು ಆರೋಪಿಯ ಅಪರಾಧಿ ಸಾಬೀತಾಗಿರುವುದಾಗಿ ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಸೋಮವಾರ ಪ್ರಕಟಿಸುವ ಸಾಧ್ಯತೆ ಇದೆ.

ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ (ಪೊಕ್ಸೆ) ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದರು.

Leave A Reply

Your email address will not be published.