ಆಯುಧ ಪೂಜೆಯ ದಿನ ಯಾಕೆ ವಾಹನಗಳನ್ನು ಪೂಜಿಸಬೇಕು | ಆಯುಧ ಪೂಜೆಯ ಮಹತ್ವ |

ನವರಾತ್ರಿ ಹಬ್ಬ ಮುಗಿಯುತ್ತಿದೆ. ಇಂದು ಒಂಬತ್ತನೇಯ ದಿನ. ನವಮಿ ಅಥವಾ ಆಯುಧಪೂಜೆ ಎಂದು ಇಂದು ಆಚರಣೆ ಮಾಡಲಾಗುತ್ತದೆ. ಈ ದಿನ ಹಿಂದೂಗಳಲ್ಲಿ ವಿಶೇಷವಾದ ಆಚರಣೆಗಳನ್ನು ಮಾಡಲಾಗುತ್ತದೆ. ಆಶ್ವಯುಜ ಮಾಸದ ಶುಕ್ಲ ಪಕ್ಷದ ನವಮಿಯ ದಿನ. ಇಂದು ಆಯುಧಗಳನ್ನು ಪೂಜೆ ಮಾಡುವ ದಿನ. ಈ ಹಿಂದೆ ಮೈಸೂರಿನ ಮಹಾರಾಜರು ಸೇರಿದಂತೆ ಬೇರೆ ರಾಜ ಮಹಾರಾಜರು ಮಹಾನವಮಿಯ ದಿನ ಎಲ್ಲಾ ಆಯುಧಗಳನ್ನು, ತಮ್ಮ ಪಟ್ಟದ ಕತ್ತಿಯನ್ನೂ ಇಟ್ಟು ಪೂಜೆ ಮಾಡುತ್ತಿದ್ದರು. ಮೊದಲೆಲ್ಲ ರಾಜ ಮಹಾರಾಜರಿಗೆ ತಮ್ಮ ಆಯುಧಗಳ ಬಹಳ ಮುಖ್ಯವಾಗಿದ್ದವು. ವರ್ಷವಿಡೀ ಆಯುಧಗಳು ನಮ್ಮನ್ನು ರಕ್ಷಣೆ ಮಾಡುತ್ತವೆ. ಅವುಗಳಿಗೆ ಒಂದು ದಿನ ವಿರಾಮ ನೀಡಿ, ರಕ್ಷಣೆ ಮಾಡುವುದಕ್ಕೆ ಧನ್ಯವಾದ ಅರ್ಪಿಸಲು ಈ ದಿವನ್ನು ಮೀಸಲಿಡಲಾಗುತ್ತದೆ. ರಾಜರ ಆಳ್ವಿಕೆ ಮುಗಿದರೂ, ಈ ಆಯುಧ ಪೂಜೆ ಇಂದಿಗೂ ಎಲ್ಲರೂ ಆಚರಿಸುತ್ತಾರೆ.ಈ ದಿನ ದೇವರ ಪೂಜೆಯ ಜೊತೆ ಆಯುಧಗಳಿಗೂ ಪೂಜೆ ಮಾಡಬೇಕು. ಮನೆಯಲ್ಲಿ ದಿನ ನಿತ್ಯ ಉಪಯೋಗಿಸುವ ವಸ್ತುಗಳನ್ನು ಇಟ್ಟು ಪೂಜೆ ಮಾಡಲಾಗುತ್ತದೆ. ಹಿಂದೂ ಸಂಸ್ಕೃತಿಯ ಪ್ರಕಾರ ಯಂತ್ರಗಳಿಗೂ ದೈವೀಕ ಶಕ್ತಿ ಇದೆ, ಇದರಿಂದಾಗಿ ಆಯುಧ ಪೂಜೆಯಂದು ವಾಹನಗಳಿಗೆ ಪೂಜೆ ಸಲ್ಲಿಸಿದರೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಎಂಬ ನಂಬಿಕೆ ಇದೆ.

ಆಯುಧ ಪೂಜೆ ಹಿನ್ನಲೆ ::

ಪೌರಾಣಿಕ ಹಿನ್ನೆಲೆಯ ಪ್ರಕಾರ ದುರ್ಗೆಯು ಚಾಮುಂಡಿಯ ಅವತಾರವನ್ನು ತಾಳಿ ದುಷ್ಟನಾದ ಮಹಿಷಾಸುರನನ್ನು ಸಂಹರಿಸುತ್ತಾಳೆ. ಮಹಿಷನನ್ನು ಸಂಹರಿಸಲು ದೇವಿ ಉಪಯೋಗಿಸಿದ ಆಯುಧಗಳನ್ನು ಆಕೆ ಮತ್ತೆ ಬಳಸದೇ ಭೂಲೋಕದಲ್ಲಿ ಎಸೆದು ಹೋಗುತ್ತಾಳೆ. ನಂತರ ದೇವಿ ಎಸೆದ ಆಯುಧಗಳನ್ನು ಮನುಷ್ಯರು ತಂದು ಪೂಜಿಸಲು ಆರಂಭಿಸಿದರು ಇದೇ ಮುಂದೆ ಆಯುಧ ಪೂಜೆಯಾಗಿ ಆಚರಣೆಗೆ ಬಂತು ಎನ್ನುವ ನಂಬಿಕೆ ಇದೆ.

Ad Widget / / Ad Widget

ಇನ್ನೊಂದು ಕಥೆಯ ಪ್ರಕಾರ, ದ್ವಾಪರ ಯುಗದಲ್ಲಿ ಪಾಂಡವರು 12 ವರ್ಷ ವನವಾಸ ಹಾಗೂ ಒಂದು ವರ್ಷ ಅಜ್ಞಾತವಾಸ ಮುಗಿಸಿ ಬಂದ ದಿನವೇ ವಿಜಯದಶಮಿ ಎನ್ನಲಾಗುತ್ತದೆ. ಅಜ್ಞಾತವಾಸದ ಸಮಯದಲ್ಲಿ ಪಾಂಡವರು ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನೀ ಮರದಲ್ಲಿ ಬಚ್ಚಿಟ್ಟಿರುತ್ತಾರೆ. ಅಜ್ಞಾತವಾಸ ಕಳೆದ ವಿಜಯದಶಮಿಯಂದು ಬನ್ನೀ ಮರದಲ್ಲಿ ಬಚ್ಚಿಟ್ಟಿದ್ದ ಆಯುಧಗಳನ್ನು ತೆಗೆದು ಪೂಜಿಸಿ, ನಂತರ ವಿರಾಟರಾಜನ ಶತ್ರುಗಳಾದ ಕೌರವರ ಮೇಲೆ ವಿಜಯವನ್ನು ಸಾಧಿಸಿದರು ಎಂಬ ನಂಬಿಕೆ ಇದೆ.

ಆಯುಧ ಪೂಜಾ ಹೆಸರು ಸೂಚಿಸುವಂತೆ ಈ ದಿನ ಆಯುಧಗಳನ್ನು ಪೂಜೆ ಮಾಡುವುದು ಬಹಳ ಮುಖ್ಯ. ಹಾಗಾಗಿ ಅವಳು ಧರಿಸಿರುವ ಆಯುಧಗಳಾದ ಬಿಲ್ಲು ,ಶೂಲ ,ಬಾಣ ,ಗುರಾಣಿ ,ಕತ್ತಿ ,ಶಂಖ ,ಚಕ್ರ , ಗದೆಗಳನ್ನು ಮಹಾನವಮಿಯಂದು ಪೂಜಿಸಬೇಕು. ಆಯುಧ ಪೂಜೆಯಂದು ಆಯುಧಗಳನ್ನು ಇರಿಸಿ ಕಲಶವನ್ನು ಸ್ಥಾಪಿಸಿ ದುರ್ಗಾ ದೇವಿಹಾಗೂ ನರಸಿಂಹದೇವರನ್ನು ಶೋಡಷೋಚಾರಪೂಜೆಗಳಿಂದ ಪೂಜಿಸಬೇಕು. ಅರಿಶಿನ ಕುಂಕುಮ ಅಥವಾ ಸಿಂಧೂರವನ್ನು ಪೂಜೆಗೆ ಇಟ್ಟು ಪೂಜಿಸಬೇಕು. ಪೂಜೆ ದಿನ ಬಾಳೆಯ ಗಿಡವನ್ನು ವಾಹನಕ್ಕೆ ಕಟ್ಟಬೇಕು. ಬಾಳೆಎಲೆಯಲ್ಲಿ ವೀಳ್ಯದೆಲೆ,ಅಡಿಕೆ,ಬಾಳೆಹಣ್ಣು, ಕಬ್ಬಿನ ತುಂಡು ಹಾಗೂ ಇತರ ಹಣ್ಣುಗಳನ್ನು ಹಾಕಿ ನಂತರ ಮಂಡಕ್ಕಿ ಹಾಗೂ ಬೆಲ್ಲವನ್ನು ಮಿಶ್ರಣ ಮಾಡಿ ಒಂದು ತೆಂಗಿನಕಾಯಿ ಒಡೆದು ಬಾಳೆಲೆಯ ಮೇಲೆ ಇಡಬೇಕು.ಇವೆಲ್ಲದರ ನಂತರ ಆರತಿ ಮಾಡಬೇಕು. ಕುಂಬಳಕಾಯಿ ಅಥವಾ ನಿಂಬೆಹಣ್ಣನ್ನು ಕೆಟ್ಟದೃಷ್ಟಿ ಬೀಳದಂತೆ ವಾಹನ ಅಥವಾ ಆಯುಧಕ್ಕೆ ನೀವಾಳಿಸಿ ಒಡೆಯಬೇಕು.ಈ ರೀತಿ ಮಾಡಿದರೆ ವಾಹನಗಳಿಗೆ ಯಾವುದೇ ವಿಘ್ನ ಬರುವುದಿಲ್ಲ ಎಂಬ ನಂಬಿಕೆ ಇದೆ.

Leave a Reply

error: Content is protected !!
Scroll to Top
%d bloggers like this: