ಚೀನಾಗೆ ಸೆಡ್ಡುಹೊಡೆದ ಭಾರತ | ಚೀನಾ ಹಿಡಿತದಲ್ಲಿದ್ದ ನಾರ್ವೆಯ ಸೋಲಾರ್ ಕಂಪನಿ ಖರೀದಿಸಿದ ರಿಲಯನ್ಸ್

ಸದಾ ಒಂದಿಲ್ಲೊಂದು ವಿಷಯದಲ್ಲಿ ಕ್ಯಾತೆ ತೆಗೆಯುತ್ತಿದ್ದ ಚೀನಾಕ್ಕೆ ಈ ಬಾರಿ ದೊಡ್ಡ ಹೊಡೆತವನ್ನೇ ಭಾರತ ನೀಡಿದೆ. ನಾರ್ವೆಯ ಆರ್‌ಇಸಿ ಸೋಲಾರ್‌ ಹೋಲ್ಡಿಂಗ್ಸ್‌ ಕಂಪನಿಯನ್ನು ರಿಲಯನ್ಸ್‌ ಕಂಪನಿ 771 ದಶಲಕ್ಷ ಡಾಲರ್‌ಗೆ (ಅಂದಾಜು 5,792 ಕೋಟಿ ರೂ.) ಖರೀದಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಂಗಸಂಸ್ಥೆಯಾದ ರಿಲಯನ್‌ ನ್ಯೂ ಎನರ್ಜಿ ಲಿಮಿಟೆಡ್‌, ಚೀನಾ ನ್ಯಾಷನಲ್ ಬ್ಲೂಸ್ಟಾರ್ ಕಂಪನಿಯಲ್ಲಿದ್ದ ಆರ್‌ಇಸಿ ಕಂಪನಿಯ ಶೇ.100 ರಷ್ಟು ಷೇರುಗಳನ್ನು ಖರೀದಿಸಿರುವುದಾಗಿ ಬಿಎಸ್‌ಇಗೆ(ಬಾಂಬೆ ಸ್ಟಾಕ್‌ ಎಕ್ಸ್‌ಚೆಂಜ್‌)ಮಾಹಿತಿ ನೀಡಿದೆ.

1996 ರಲ್ಲಿ ಆರ್‌ಇಸಿ ಕಂಪನಿ ಸ್ಥಾಪನೆಯಾಗಿದ್ದು, ಸಿಂಗಾಪುರದಲ್ಲಿ ತನ್ನ ಕಾರ್ಯಕಾರಿ ಕೇಂದ್ರವನ್ನು ಹೊಂದಿದೆ. ಉತ್ತರ ಅಮೆರಿಕ, ಯುರೋಪ್, ಆಸ್ಟ್ರೇಲಿಯಾ ಮತ್ತು ಏಷ್ಯಾ ಪೆಸಿಫಿಕ್ ನಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದೆ. 2015 ರಲ್ಲಿ ಚೀನಾ 419 ದಶಲಕ್ಷ ಯುರೋಗೆ ಆರ್‌ಇಸಿ ಕಂಪನಿಯನ್ನು ಖರೀದಿಸಿತ್ತು.

ಕಂಪನಿ ಬಳಿ 600 ಕ್ಕೂ ಹೆಚ್ಚು ಯುಟಿಲಿಟಿ ಮತ್ತು ವಿನ್ಯಾಸದ ಪೇಟೆಂಟ್‌ಗಳನ್ನು ಹೊಂದಿದ್ದು, ಅದರಲ್ಲಿ 446 ಮಂಜೂರು ಮಾಡಲಾಗಿದೆ ಮತ್ತು ಉಳಿದವು ಮೌಲ್ಯಮಾಪನದಲ್ಲಿದೆ. ಹೆಚ್ಚಾಗಿ ಈ ಕಂಪನಿ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ. ಪಾಲಿಸಿಲಿಕಾನ್, ಬಿಲ್ಲೆಗಳು, ಸೌರ ಕೋಶಗಳು(ಸೋಲಾರ್‌ ಸೆಲ್‌), ಸೌರ ಘಟಕಗಳನ್ನು(ಸೋಲಾರ್‌ ಮಾಡ್ಯೂಲ್ಸ್‌) ಆರ್‌ಇಸಿ ಕಂಪನಿ ತಯಾರಿಸುತ್ತದೆ.

ಮುಂದಿನ ಮೂರು ವರ್ಷದಲ್ಲಿ 10.1 ಶತಕೋಟಿ ಡಾಲರನ್ನು ನವೀಕರಿಸಬಹುದಾದ ಶಕ್ತಿಯ ಮೇಲೆ ಹೂಡಿಕೆ ಮಾಡುವುದಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ ಈ ಹಿಂದೆ ಘೋಷಿಸಿದ್ದು, ಇದರ ಭಾಗವಾಗಿ ಈ ಕಂಪನಿಯನ್ನು ಖರೀದಿ ಮಾಡಿದೆ. ರಿಲಯನ್ಸ್‌ ಕಂಪನಿ ಸೌರ ಕೋಶಗಳು ಮತ್ತು ಮಾಡ್ಯೂಲ್‌ಗಳು, ಬ್ಯಾಟರಿಗಳು, ಇಂಧನ ಕೋಶಗಳು ಮತ್ತು ಹಸಿರು ಹೈಡ್ರೋಜನ್ ಉತ್ಪಾದನೆಯ ಸಂಬಂಧ ನಾಲ್ಕು ಗಿಗಾ ಫ್ಯಾಕ್ಟರಿಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

ಒಟ್ಟಿನಲ್ಲಿ ಚೀನಾದ ಹಿಡಿತದಲ್ಲಿದ್ದ ಕಂಪೆನಿಯನ್ನು ಭಾರತ ತನ್ನ ಕೈವಶ ಮಾಡಿಕೊಂಡಿರುವುದು ದೊಡ್ಡ ಸಾಧನೆಯೇ ಸರಿ. ಚೀನಾ ಭಾರತದ ಮೇಲೆ ಕಳ್ಳ ಸಂಚು ರೂಪಿಸಿ ಉಪಟಳ ಕೊಡಲು ಪ್ರಯತ್ನಿಸಿದರೆ, ಭಾರತ ತನ್ನ ಅಭಿವೃದ್ಧಿಯ ಮೂಲಕ ಚೀನಾಕ್ಕೆ ತಕ್ಕ ಪಾಠ ಕಲಿಸುತ್ತಿದೆ.

Leave A Reply

Your email address will not be published.