ಬೆಳ್ತಂಗಡಿ | ತಾನು ವಿಷ ಸೇವಿಸಿ ಮಕ್ಕಳಿಗೂ ಜ್ಯೂಸ್ ನಲ್ಲಿ ವಿಷ ಬೆರೆಸಿ ಕುಡಿಸಿದ ಪಾಪಿ ತಂದೆ

ವ್ಯಕ್ತಿಯೋರ್ವ ತಾನು ವಿಷ ಸೇವಿಸಿದಲ್ಲದೇ ತನ್ನ ಮಕ್ಕಳಿಗೂ ಜ್ಯೂಸ್ ನಲ್ಲಿ ವಿಷ ಬೆರಿಸಿಕೊಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಬಾಳೆಗುಂಡಿಯಲ್ಲಿ ನಡೆದಿದೆ.

 

ಈ ಕೃತ್ಯ ಎಸಗಿದ ವ್ಯಕ್ತಿಯನ್ನು ಶಿಶಿಲ ಗ್ರಾಮದ ಬಾಳೆಗುಂಡಿ ನಿವಾಸಿ ವಿಶ್ವನಾಥ ಎಂದು ಗುರುತಿಸಲಾಗಿದೆ.

ವಿಶ್ವನಾಥ ಕುಡಿತದ ಚಟ ಹೊಂದಿದ್ದು, ಕುಡಿದು ಬಂದು ಪತ್ನಿ ಚಂದ್ರಾವತಿ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಆರೋಪಿ ವಿಶ್ವನಾಥ ಅಪ್ರಾಪ್ತ ಮಕ್ಕಳಿಗೆ ಜ್ಯೂಸ್ ನೀಡಿದ್ದು, ಓರ್ವ ಮಗ ಜ್ಯೂಸ್ ಬೇಡವೆಂದು ನಿರಾಕರಿಸಿದ್ದಾನೆ. ಇನ್ನೋರ್ವ ಮಗನಿಗೆ ಒತ್ತಾಯ ಪೂರ್ವಕವಾಗಿ ಜ್ಯೂಸ್ ಕುಡಿಸಿದ್ದಾನೆ. ಈ ಬಗ್ಗೆ ಹೆಂಡತಿ ಪ್ರಶ್ನಿಸಿದಾಗ ವಿಶ್ವನಾಥ ‘ನಾನು ಜ್ಯೂಸ್ ನಲ್ಲಿ ಮಗನಿಗೆ ವಿಷ ಬೆರೆಸಿ ಕುಡಿಸಿದ್ದೇನೆ, ಅಷ್ಟೇ ಅಲ್ಲದೇ ನಾನು ಕೂಡ ವಿಷ ಕುಡಿದಿದ್ದೇನೆ’ ಎಂದು ಹೇಳಿದ್ದಾನೆ.

ಗಾಬರಿಗೊಂಡ ಚಂದ್ರಾವತಿ ಕೂಡಲೇ ಮಗನನ್ನು ಮತ್ತು ಗಂಡ ವಿಶ್ವನಾಥನನ್ನು ನೆಲ್ಯಾಡಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರಿಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೀಗ ಪತಿ ವಿರುದ್ಧವೇ ಪತ್ನಿ ಚಂದ್ರಾವತಿ ದೂರು ದಾಖಲಿಸಿದ್ದು, ಆರೋಪಿಯು ಕೊಲ್ಲುವ ಉದ್ದೇಶದಿಂದ ಈ ಕೃತ್ಯವೆಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಅ.ಕ್ರ. 84/2021 ಕಲಂ. 307,328, ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.