ವಾನರ ಸೇನೆಯಿಂದ ಖಾಸಗಿ ಬಸ್ ಮೇಲೆ ದಾಳಿ | ತೆಂಗಿನಕಾಯಿ ಎಸೆದು ಮುಂಭಾಗದ ಗಾಜು ಪುಡಿ ಪುಡಿ, ಇಬ್ಬರು ಪ್ರಯಾಣಿಕರಿಗೆ ಗಾಯ

ಕೋತಿಗಳ ಹಿಂಡು ಮನೆ, ದೇವಸ್ಥಾನ ಇತರ ಪ್ರದೇಶಗಳಲ್ಲಿ ಜನರಿಗೆ ಉಪಟಳ ಕೊಡುವುದು ಮಾಮೂಲು. ಆದರೆ ಇಲ್ಲೊಂದು ವಿಚಿತ್ರವಾಗಿ ವಾನರ ಸೇನೆಯ ಪುಂಡಾಟ ನಡೆದಿದೆ.

ಹೌದು, ಚಲಿಸುತ್ತಿದ್ದ ಬಸ್ ಮೇಲೆ ಕೋತಿಗಳ ಹಿಂಡೊಂದು ಯರ್ರಾಬಿರ್ರಿ ತೆಂಗಿನಕಾಯಿ ಎಸೆದ ಪರಿಣಾಮ ಬಸ್ಸಿನ ಮುಂಭಾಗದ ಗಾಜು ಪುಡಿ ಪುಡಿಯಾಗಿ, ಪ್ರಯಾಣಿಕರಿಬ್ಬರು ಗಾಯಗೊಂಡಿರುವ ವಿಚಿತ್ರ ಘಟನೆ ಕೇರಳದ ಇರಿತ್ತಿಯಲ್ಲಿ ನಡೆದಿದೆ.

ಸೆಂಟ್ ಜ್ಯೂಡ್ ಹೆಸರಿನ ಖಾಸಗಿ ಬಸ್ ಇರಿತ್ತಿ ಮತ್ತು ನೆರುಂಪೊಯಿಲ್ ನಡುವೆ ಸಂಚರಿಸುವಾಗ ಮಾರ್ಗ ಮಧ್ಯೆ ಮಂಗಗಳ ಗುಂಪು ದಾಳಿ ಮಾಡಿದೆ. ರಸ್ತೆ ಪಕ್ಕದ ತೆಂಗಿನಮರದ ಮೇಲೆ ಮಂಗಗಳು ಬೀಡು ಬಿಟ್ಟಿದ್ದ ವೇಳೆ ಬಸ್ ವೇಗವಾಗಿ ಚಲಿಸಿದೆ. ಇದರಿಂದ ಉದ್ರಿಕ್ತಗೊಂಡ ಮಂಗಗಳ ಗುಂಪು ಬಸ್ಸಿನತ್ತ ತೆಂಗಿನಕಾಯಿಗಳನ್ನು ತೂರಿವೆ. ಇದರಿಂದ ಬಸ್ಸಿನ ಮುಂಭಾಗದ ಗಾಜು ಸಂಪೂರ್ಣ ಪುಡಿ ಪುಡಿಯಾಗಿದೆ.

ಇನ್ನು ಈ ಘಟನೆಯಿಂದ ಬಸ್ ಸೇವೆ ಸುಮಾರು ಅರ್ಧ ದಿನ ಸ್ಥಗಿತಗೊಂಡಿತು. ಬಸ್ ಮಾಲೀಕ ಜಾನ್ಸನ್ ವಿಂಡ್ ಶೀಲ್ಡ್ ಬದಲಿಸಲು 17 ಸಾವಿರ ರೂ. ಖರ್ಚು ಮಾಡಿದ್ದಾರೆ. ಇತ್ತ ಮಂಗಗಳು ಮಾಡಿದ ಕೆಲಸದ ಹೊಣೆಯನ್ನು ಹೊರಲು ನಿರಾಕರಿಸಿರುವ ಅರಣ್ಯ ಇಲಾಖೆ ಬಸ್ ಮಾಲೀಕರಿಗೆ ಪರಿಹಾರ ನೀಡಲು ಶೂನ್ಯ ಅವಕಾಶವನ್ನು ಉಲ್ಲೇಖಿಸಿದ್ದಾರೆ.

ಮಂಗಗಳ ನಿರಂತರ ದಾಳಿಯಿಂದಾಗಿ, ಈ ಪ್ರದೇಶದ ಮೂಲಕ ಕೇವಲ ಒಂದು ಬಸ್ ಸೇವೆಯನ್ನು ಮಾತ್ರ ನಡೆಸಲಾಗುತ್ತದೆ. ಸ್ಥಳೀಯರು, ಪ್ರಯಾಣಿಕರು ಮತ್ತು ಪಾದಚಾರಿಗಳು ಸಹ ದಿನೇ ದಿನೇ ಕೋತಿಗಳ ದಾಳಿಯನ್ನು ಎದುರಿಸುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆ ಈ ಸಮಸ್ಯೆಯನ್ನು ಪರಿಹರಿಸಲು ಇನ್ನೂ ನಿರ್ಣಾಯಕ ಹೆಜ್ಜೆಯನ್ನು ತೆಗೆದುಕೊಂಡಿಲ್ಲ. ಈಗಲಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಲಿ ಎಂಬುದು ಇಲ್ಲಿನ ಜನರ ಆಶಯವಾಗಿದೆ.

Leave A Reply

Your email address will not be published.