ಚಂದ್ರನ ಮೇಲೊಂದು ಕಾರ್ನರ್ ಸೈಟ್ ಕೊಡಿಸುವ ಭರವಸೆ | ಮಹಿಳೆಯೊಬ್ಬರಿಂದ ಹಣ ಪಡೆದು ವಂಚನೆ

ಬೆಂಗಳೂರು: ಸೈಟು, ಫ್ಲ್ಯಾಟ್, ಮನೆ, ವಿಲ್ಲಾ ಕೊಡಿಸುವ ಆಮಿಷವೊಡ್ಡಿ ಹಣ ಪಡೆದು ವಂಚನೆ ಪ್ರಕರಣ ನಡೆಯುತ್ತಿರುವುದು ಮಾಮೂಲು. ಆದರೆ, ಇಲ್ಲೊಬ್ಬ ಪ್ರೊಫೆಷನಲ್ ವಂಚಕಿಯು ಅನ್ಯ ಗೃಹದ ಮೇಲೆ ಸೈಟು ಕೊಡಿಸುವ ಅಮಿಷ ಹುಟ್ಟಿಸಿ ಹಣ ಪಡೆದು ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರು ನಗರ ಸೈಬರ್ ಕ್ರೈಂ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಜಾಲತಾಣದಲ್ಲಿ ಉಸ್ಮಾ ಅಬೂಬಕರ್ ಎಂಬಾಕೆ ಪರಿಚಯವಾಗಿ ಕ್ರಿಪ್ಟ್ ಕರೆನ್ಸಿ ವ್ಯವಹಾರ ತಜ್ಞೆ ಎಂದು ತನ್ನನ್ನು ತಾನು ಪರಿಚಯ ಮಾಡಿಕೊಂಡು ಈ ವಂಚನೆ ಮಾಡಿದ್ದಾಳೆ. ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಅನೂಹ್ಯ ಲಾಭ ಕೊಡಿಸುವುದಾಗಿ ಆಮಿಷವೊಡ್ಡಿ 45,700 ರೂ. ಹೂಡಿಕೆ ಮಾಡುವಂತೆ ಮಹಿಳೆಯೊಬ್ಬಳನ್ನು ಪುಸಲಾಯಿಸಿದ್ದಾಳೆ. ಚಂದ್ರನ ಮೇಲೆ ಒಂದು ಕಾರ್ನರ್ ಸೈಟು ಕೊಡಿಸುವುದಾಗಿ ಪುಂಗಿ ಬಿಟ್ಟಿದ್ದಾಳೆ. ಬಿಎಂಆರ್ ಡಿ ಸೈಟ್ ಮಾಡಕ್ಕಂತೂ ಆಗಿಲ್ಲ, ಚಂದ್ರನ ಮೇಲೆ ಸೈಟ್ ಗೆ ಈಗ ಅಷ್ಟು ರಶ್ ಇಲ್ಲ, ಯಾವುದಕ್ಕೂ ಬುಕ್ ಮಾಡ್ಕೊಂಡು ಬಿಡೋಣ ಅಂದುಕೊಂಡು ದುಡ್ಡು ಹಾಕಿದ ಮಹಿಳೆಗೆ ಕೊನೆಗೂ ಮೋಸ ಆಗಿದೆ.

ಉಸ್ಮಾ ಅಬೂಬಕರ್ ಳ ಮಾತು ನಂಬಿ 25 ಸಾವಿರ ರೂ. ಗೂಗಲ್ ಪೇ ಮೂಲಕ ವರ್ಗಾವಣೆ ಮಾಡಲಾಗಿದೆ. ಆದರೆ, ಯಾವುದೇ ಲಾಭಾಂಶ ಸಿಗಲಿಲ್ಲ. ಆಕೆಯನ್ನು ಸಂಪರ್ಕ ಮಾಡಲು ಪ್ರಯತ್ನಿಸಿದಾಗ ಸಂಪರ್ಕಕ್ಕೆ ಲಭ್ಯವಾಗಲಿಲ್ಲ ಎಂದು ಮೋಸಕ್ಕೆ ಒಳಗಾದ ಮಹಿಳೆ ಆರೋಪಿಸಿದ್ದಾರೆ.

ಇದಾದ ಮೇಲೆ ಗೂಗಲ್ ಪೇ ಮೂಲಕ ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆ ಜಾಡು ಪತ್ತೆ ಮಾಡಿದಾಗ ಆಕಾಶ್ ನಾರಾಯಣ್ ಎಂಬಾತನಿಗೆ ಸೇರಿದ ಐಸಿಐಸಿಐ ಬ್ಯಾಂಕ್ ಖಾತೆ ಆಗಿತ್ತು. ಈತ ಇದೇ ರೀತಿ ಹಲವರಿಗೆ ವಂಚನೆ ಮಾಡಿರುವುದು ಸಹ ಬೆಳಕಿಗೆ ಬಂದಿದೆ. ಅಲ್ಲದೆ, ಚಂದ್ರನ ಮೇಲೆ ಸೈಟು ಕೊಡಿಸುವುದಾಗಿ ನಂಬಿಸಿ ಅಕ್ರಮವಾಗಿ ಹಲವರಿಂದ ಹಣ ವಸೂಲಿ ಮಾಡಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ. ಇದರ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.