ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಗಢ | ಮೂವರು ಸ್ಥಳದಲ್ಲೇ ಸಾವು, ಹಲವರ ಸ್ಥಿತಿ ಗಂಭೀರ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.

ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಮೃತರ ದೇಹ ಛಿದ್ರಛಿದ್ರವಾಗಿ ಸುಮಾರು ದೂರದವರೆಗೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಬನ್ನೇರುಘಟ್ಟ ರಸ್ತೆಯ ದೇವರಚಿಕ್ಕನಹಳ್ಳಿಯ ಆಶ್ರಿತ್ ಶೆಲ್ಟರ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿದ್ದ ಅಗ್ನಿ ದುರಂತ ಮಾಸುವ ಮುನ್ನವೇ, ವಿವಿ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸೀತಾಪತಿ ಅಗ್ರಹಾರದ ಅಂಗಡಿಯೊಂದರಲ್ಲಿ ಹೈಡೋಲಿಕ್ ಕಂಪೈಸರ್ ಸ್ಫೋಟಗೊಂಡಿದ್ದು, ಬೆಂಕಿಯ ಕೆನ್ನಾಲಿಗೆ ತಾಗಿ ಪಾಟಾಕಿ ಬಾಕ್ಸ್‌ಗಳೂ ಸ್ಫೋಟಗೊಂಡು ಧಗಧಗ ಹೊತ್ತಿ ಉರಿದಿದೆ.

ಮೃತರನ್ನು ಅಸ್ಲಾಂ, ಫಯಾಜ್, ಮನೋಹರ್ ಎಂದು ಗುರುತಿಸಲಾಗಿದೆ. ಸ್ಫೋಟದ ವೇಳೆ ಪಂಕ್ಚರ್ ಅಂಗಡಿ ಮುಂದೆ ನಿಂತಿದ್ದ 10ಕ್ಕೂ ಹೆಚ್ಚು ವಾಹನಗಳು ಜಖಂ ಆಗಿದ್ದು, ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಇದೀಗ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಘಟನಾ ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಈ ದುರಂತ ಗುರುವಾರ ಮಧ್ಯಾಹ್ನ 12.10ರ ಸುಮಾರಿಗೆ ಸಂಭವಿಸಿದ್ದು, ಸುತ್ತಮುತ್ತಲ ಕಟ್ಟಡಗಳಿಗೂ ಹಾನಿ ಉಂಟಾಗಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.