ಬೆಳ್ತಂಗಡಿ | ಎಳನೀರು ಪ್ರದೇಶದ ಜನರ ಎಷ್ಟೋ ವರ್ಷಗಳ ಹೋರಾಟಕ್ಕೆ ಕೊನೆಗೂ ಸಿಕ್ಕಿದೆ ಜಯ |ದಿಡುಪೆ-ಎಳನೀರು-ಸಂಸೆ ನಡುವಿನ ರಸ್ತೆಯ ಸರ್ವೇ ಕಾರ್ಯ ಕೈಗೊಳ್ಳಲು ಅರಣ್ಯ ಇಲಾಖೆ ವನ್ಯಜೀವಿ ವಿಭಾಗದಿಂದ ಸಿಕ್ಕಿದೆ ಅನುಮತಿ
ಅನೇಕ ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿರುವಂತಹ ಒಂದು ನಡೆಗೆ ಕೊನೆಗೂ ಫಲಶ್ರುತಿ ದೊರೆಯುತ್ತಿದೆ. ಇಷ್ಟು ವರ್ಷ ಪಟ್ಟ ಪಾಡಿಗೆ ಈಗ ಮುಕ್ತಿ ದೊರಕುವ ಕಾಲ ಹತ್ತಿರ ಬಂದಿದೆ. ಏನಿದು? ಯಾವ ಊರಿನ ಕಥೆಯೆಂದು ಯೋಚಿಸುತ್ತಿದ್ದೀರಾ?
ಅದು ಬೇರಾವುದೂ ಅಲ್ಲ, ಬೆಳ್ತಂಗಡಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನವನದ ಮೂಲಕ ಹಾದು ಹೋಗುವ ದಿಡುಪೆ-ಎಳನೀರು-ಸಂಸೆ ನಡುವಿನ ರಸ್ತೆಯ ಕಥೆ. ಇದೀಗ ಈ ರಸ್ತೆ ನಿರ್ಮಿಸುವ ಬಗ್ಗೆ ಸರ್ವೇ ಕಾರ್ಯ ಕೈಗೊಳ್ಳಲು ಕೊನೆಗೂ ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಅನುಮತಿಸಿದ್ದು, ತಾಲೂಕಿನ ದಿಡುಪೆ ಭಾಗದ ಜನರ ಬಹುಕಾಲದ ಬೇಡಿಕೆಯೊಂದು ಈಡೇರುವ ಕಾಲ ಸನ್ನಿಹಿತವಾಗಿದೆ.
ಅನೇಕ ವರ್ಷಗಳ ಹೋರಾಟದ ಫಲವಾಗಿ ವನ್ಯಜೀವಿ ವಿಭಾಗವು ರಸ್ತೆಗೆ ಸರ್ವೇ ನಡೆಸುವಂತೆ ಲೋಕೋಪಯೋಗಿ ಇಲಾಖೆಯ ಬೆಳ್ತಂಗಡಿ ಸಹಾಯಕ ಕಾರ್ಯಪಾಲಕ ಅಭಿಯಂತ ಶಿವಪ್ರಸಾದ್ ಅವರಿಗೆ ಪತ್ರ ಬರೆದು ಸೂಚನೆ ನೀಡಿದೆ. ಮಳೆ ಪರಿಸ್ಥಿತಿ ಅವಲೋಕಿಸಿ ಸರ್ವೇ ಕಾರ್ಯದ ರೂಪುರೇಖೆ ಸಿದ್ಧವಾಗಲಿದೆ.
ಘಾಟಿ ಕ್ರಮಿಸುವ ವ್ಯಾಪ್ತಿ ಅತೀ ಕಡಿಮೆ:
ಗುಡ್ಡ ಕುಸಿತದಿಂದ ನಲುಗಿರುವ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಕಾಲಕ್ರಮೇಣ ಸಂಚಾರ ಬಾಧಿತವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ದಿಡುಪೆ-ಸಂಸೆ ರಸ್ತೆಯು ಪರ್ಯಾಯವಾಗುವ ಜೊತೆಗೆ ಕೇವಲ 7 ಕಿ.ಮೀ.ಗಳಷ್ಟೇ ಘಾಟಿ ಪ್ರದೇಶದಲ್ಲಿ ಕ್ರಮಿಸುವ ಅಂತರವಾಗಲಿದೆ.
ಉಳಿದಂತೆ ಮಾಳ ಮತ್ತು ಚಾರ್ಮಾಡಿ ಘಾಟಿಗಳಲ್ಲಿ 20 ಕಿ.ಮೀ. ದೂರ ಕ್ರಮಿಸಬೇಕಿದೆ. ನೂತನ ರಸ್ತೆ ನಿರ್ಮಾಣಕ್ಕೆ ದೊಡ್ಡ ಸೇತುವೆಗಳ ಆವಶ್ಯಕತೆಯಿಲ್ಲ. ಮೋರಿಗಳ ಆಗತ್ಯವಷ್ಟೇ ಇದೆ. ಭಾರೀ ಮರಗಳ ತೆರವಿಗೆ ಆಸ್ಪದವಿಲ್ಲ. 4 ಕಿ.ಮೀ. ರಸ್ತೆಯಷ್ಟೇ ವನ್ಯಜೀವಿ ವಲಯಕ್ಕೆ ಸೇರಲಿದ್ದು, ಉಳಿದಂತೆ ಎಳನೀರು ಗಡಿಯಿಂದ ಹಲಸಿನಕಟ್ಟೆವರೆಗಿನ 3.30 ಕಿ.ಮೀ. ಕಂದಾಯ ಭೂಮಿಗೆ ಸೇರಿದ್ದಾಗಿದೆ.
ಪ್ರಮುಖ ಪ್ರಯೋಜನ:
ರಾ.ಹೆ. 73ರ ಚಾರ್ಮಾಡಿ ರಸ್ತೆಗೆ ಪರ್ಯಾಯ ರಸ್ತೆಯಾಗುವ ಜೊತೆಗೆ 4 ಪ್ರಮುಖ ಯಾತ್ರಾಸ್ಥಳಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡುಗಳನ್ನು ಬಹುಬೇಗನೆ ಸಂದರ್ಶಿಸಲು ಅನಕೂಲವಾಗಲಿದೆ. ಇಲ್ಲವಾದಲ್ಲಿ 150 ಕಿ.ಮೀ. ಸುತ್ತುಬಳಸಿ ಚಾರ್ಮಾಡಿ ಅಥವಾ ಬಜಗೋಳಿಯಾಗಿ ಬಂದು ಹೊರನಾಡಿನಿಂದ ಶೃಂಗೇರಿಗೆ ತೆರಳಬೇಕಾಗಿದೆ. ನೂತನ ರಸ್ತೆಯಾದಲ್ಲಿ 100 ಕಿ.ಮೀ. ಉಳಿತಾಯವಾಗಲಿದೆ.
ಮತ್ತೊಂದೆಡೆ ಎಳನೀರು ಪ್ರದೇಶದಲ್ಲಿ 500ಕ್ಕೂ ಅಧಿಕ ಜನಸಂಖ್ಯೆಯಿದ್ದು, ಆರೋಗ್ಯ, ಶಿಕ್ಷಣ ಇತ್ಯಾದಿಗಳಿಗಾಗಿ ತಾಲೂಕು ಕೇಂದ್ರಕ್ಕೆ ತಲುಪಲು ಅವರ ಜೀವಮಾನದ ಸಂಪರ್ಕ ರಸ್ತೆ ಇದು ಎನಿಸಿಕೊಳ್ಳಲಿದೆ. ಇಲ್ಲವಾದಲ್ಲಿ ಅವರು ಬೆಳ್ತಂಗಡಿಗೆ ತಲುಪಲು ಬಸ್ನಲ್ಲಾದರೆ 100 ಕಿ.ಮೀ. ಸುತ್ತಬೇಕು. ಕಾಲ್ನಡಿಗೆಯಲ್ಲಾದರೆ 12 ಕಿ.ಮೀ. ಕ್ರಮಿಸುವ ಅನಿವಾರ್ಯ ಎಳನೀರು ನಿವಾಸಿಗಳದ್ದು.
ಇಂತಹ ಕಷ್ಟ ಅನುಭವಿಸುತ್ತಿರುವ ಎಳನೀರು ಪ್ರದೇಶದ ಜನರಿಗೆ ಕೊನೆಗೂ ಸಿಹಿ ಸುದ್ದಿ ದೊರೆತಿದೆ. ಅವರ ಈ ಕಷ್ಟಗಳು ಸದ್ಯದಲ್ಲೇ ದೂರವಾಗಲಿದೆ.