ಗ್ರಾಮಕ್ಕೆ ರಸ್ತೆ ಸಂಪರ್ಕ ಸರಿ ಆಗುವವರೆಗೂ ಮದುವೆ ಆಗುವುದಿಲ್ಲ ಎಂದು ಶಪಥ ಮಾಡಿದ ಯುವತಿ!!|ಯುವತಿಯ ಕರೆಗೆ ಓಗೊಟ್ಟ ಬೊಮ್ಮಾಯಿ ಸರ್ಕಾರದಿಂದ ರಸ್ತೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್

ಅನೇಕ ಗ್ರಾಮಗಳಲ್ಲಿ ಇಂದಿಗೂ ರಸ್ತೆ ಸಂಪರ್ಕ ಇಲ್ಲದೆ ಪರದಾಡುತ್ತಿದ್ದಾರೆ. ಜನಪ್ರತಿನಿಧಿಗಳು ಕೇವಲ ಮತ ಕೇಳಲು ಮನೆ-ಮನೆಗೆ ಬರುತ್ತಾರೆ ವಿನಃ ಜನರ ಕಷ್ಟಗಳಿಗೆ ಸ್ಪಂದಿಸಲು ಅಲ್ಲ.

ಇದೇ ತರ ದಾವಣಗೆರೆ ತಾಲೂಕಿನ ಮಾಯಕೊಂಡ ವಿಧಾನಸಭೆ ಕ್ಷೇತ್ರದ ಎಚ್. ರಾಂಪುರ ಗ್ರಾಮದಲ್ಲಿ ಸಂಪರ್ಕ ರಸ್ತೆ ಇಲ್ಲದೇ ಜನರು ತೊಂದರೆ ಅನುಭವಿಸುವಂತಾಗಿದೆ. ರಸ್ತೆ ಸಂಪರ್ಕ ಸರಿಯಿಲ್ಲವೆಂಬ ಕಾರಣಕ್ಕೆ ಈ ಗ್ರಾಮಕ್ಕೆ ಹೆಣ್ಣು ಕೊಡುವುದು, ತೆಗೆದುಕೊಂಡು ಹೋಗುವುದಾಗಲಿ ನಡೆಯುತ್ತಿಲ್ಲ.

ಗ್ರಾಮಕ್ಕೆ ರಸ್ತೆ ಆಗುವವರೆಗೂ ಮದುವೆ ಆಗಲ್ಲ ಎಂದು ಬೇಡಿಕೆ ಇಟ್ಟಿದ್ದ ದಾವಣಗೆರೆಯ ಯುವತಿಗೆ ಸಿಎಂ ಬಸವರಾಜ ಬೊಮ್ಮಾಯಿ ಇದೀಗ ಸ್ಪಂದಿಸಿದ್ದು, ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿ ಸಿಎಂ ಕಾರ್ಯದರ್ಶಿ ಪತ್ರ ರವಾನಿಸಿದ್ದಾರೆ.

ಗ್ರಾಮಕ್ಕೆ ರಸ್ತೆ ಆಗುವವರೆಗೂ ತಾನು ಮದುವೆ ಆಗುವುದಿಲ್ಲವೆಂಬುದಾಗಿ ಸ್ನಾತಕೋತ್ತರ ಪದವೀಧರೆ ಆರ್.ಡಿ.ಬಿಂದು ಪಣ ತೊಟ್ಟಿದ್ದಾರೆ. ವರ್ಷಗಳಿಂದಲೂ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಪತ್ರ ಬರೆಯುತ್ತಲೇ ಬಂದಿದ್ದ ಬಿಂದು, ಕೆಲ ದಿನಗಳ ಹಿಂದೆ ಮಾಡಿದ್ದ ಇ-ಮೇಲ್ ಗೆ ಸಿಎಂ ಬೊಮ್ಮಾಯಿ ಸರ್ಕಾರ ಸ್ಪಂದಿಸಿದ್ದು, ಎಚ್. ರಾಂಪುರ ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿ ಸಿಎಂ ಕಾರ್ಯದರ್ಶಿ ಪತ್ರ ರವಾನಿಸಿದ್ದಾರೆ.

ಕೂಡಲಸಂಗಮದಲ್ಲಿ ಪಂಚಮಸಾಲಿ‌ಮಠದ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ಮಾಡುತ್ತಿರುವ ಆರ್.ಡಿ. ಬಿಂದು ಅವರಿಗೂ ಈಗಾಗಲೇ ಎರಡು ಬಾರಿ ಮದುವೆ ಕ್ಯಾನ್ಸಲ್‌ ಆಗಿದ್ದು,ಇದಕ್ಕೆ ಕಾರಣ ಕೂಡ ರಸ್ತೆ ಸರಿಯಿಲ್ಲದೇ ಇರುವುದು.ಆದ್ದರಿಂದ ಸಿಟ್ಟಿಗೆದ್ದಿರುವ ಶಿಕ್ಷಕಿ, ಈಗೊಂದು ಶಪಥ ಮಾಡಿದ್ದು, ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಗ್ರಾಮಕ್ಕೆ ಸರಿಯಾದ ರಸ್ತೆಯನ್ನು ಮಾಡುವವರೆಗೂ ತಾವು ಮದುವೆಯಾಗುವುದಿಲ್ಲ ಎಂದು ಅವರು ಶಪಥ ಮಾಡಿದ್ದಾರೆ.

ಇದು 40-50 ಮನೆಗಳಿರುವ ಕುಗ್ರಾಮವಾಗಿದ್ದು,ಮತಗಳು‌ ಕಡಿಮೆ ಇದೆ ಇಲ್ಲೇಕೆ ರಸ್ತೆ ಮಾಡಿಸಬೇಕು ಎಂಬ ಶಾಸಕರ ನಿರ್ಲಕ್ಷ್ಯದಿಂದಾಗಿ ಗ್ರಾಮಸ್ಥರು ಪರದಾಡುವಂತಾಗಿದೆ.ಈಗಾಗಲೇ ಅವರು ರಸ್ತೆ ರಿಪೇರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಶಾಸಕ ಪ್ರೊ.ಲಿಂಗಣ್ಣ ಅವರಿಗೆ ಮನವಿ ಸಲ್ಲಿಸಿದ್ದರೂ ಅವರು ಮತದಾರರು ಕಡಿಮೆ ಇರುವ ಕಾರಣ, ರಸ್ತೆ ನಿರ್ಮಾಣಕ್ಕೆ ಹಿಂದೇಟು ಹಾಕಿದ್ದಾರೆ.

ಯುವತಿಯ ಸೈದ್ಧಾಂತಿಕ ಪ್ರತಿಭಟನೆಗೆ ಗ್ರಾಮಸ್ಥರು ಕೈ ಜೋಡಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಈ ಕುರಿತು ಪತ್ರ ಬರೆದಿರುವ ಬಿಂದು, ಕುಗ್ರಾಮದ ವ್ಯಥೆಯನ್ನು ವಿವರಿಸಿದ್ದಾರೆ.ಎಚ್.ರಾಂಪುರ ಗುಡ್ಡಗಾಡು ಪ್ರದೇಶದಲ್ಲಿದೆ. 50 ಮನೆ, 200 ಜನಸಂಖ್ಯೆ, 180 ಮತದಾರರು ಇರುವ ಪುಟ್ಟ ಗ್ರಾಮ. ಅಲ್ಲಿಗೆ ಹೋಗಲು ರಸ್ತೆಯೇ ಇಲ್ಲ, ಬಸ್ ಸಂಚಾರ ಕನಸಿನ ಮಾತು. ಇದೇ ಕಾರಣಕ್ಕೆ ಇಲ್ಲಿನ ಬಹುತೇಕ ಜನ ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಎಚ್.ರಾಂಪುರದಿಂದ ಹೆದ್ನೆ ಗ್ರಾಮದವರೆಗೆ 5 ಕಿ.ಮೀ. ಅಂತರವಿದ್ದು, 2 ಕಿ.ಮೀ. ವರೆಗೆ ಮಾತ್ರ ರಸ್ತೆ ನಿರ್ಮಾಣವಾಗಿದ್ದು, ಅದೂ ಸುಸ್ಥಿತಿಯಲ್ಲಿಲ್ಲ. ಇನ್ನೂ 3 ಕಿ.ಮೀ. ರಸ್ತೆ ಅಭಿವೃದ್ಧಿಯಾಗಬೇಕಿದೆ. ಈ ಬೇಡಿಕೆಯೊಂದಿಗೆ ಗ್ರಾಮದ ಜನರು 3 ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರ ಮಾಡಿದ್ದರು. ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಖಾಸಗಿ ಶಾಲೆಯ ಶಿಕ್ಷಕಿಯಾಗಿರುವ ಬಿಂದು ವಿವರಿಸಿದ್ದಾರೆ.

ವರ್ಷದ ಹಿಂದೆ ಪ್ರಧಾನಿ ಮೋದಿ ಅವರಿಗೂ ಬಿಂದು ಪತ್ರ ಬರೆದಿದ್ದರಂತೆ. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಉತ್ತರ ಬಂದಿತ್ತು. ಸಿಎಂಗೆ ವಾರದ ಹಿಂದೆ ಇ ಮೇಲ್ ಮೂಲಕ ಮನವಿ ಮಾಡಿದ್ದು, ಅಲ್ಲಿಂದಲೂ ಸೂಕ್ತ ಕ್ರಮದ ಭರವಸೆ ಸಿಕ್ಕಿದೆ.

Leave A Reply

Your email address will not be published.