ತಾಲಿಬಾನ್ ಉಗ್ರರಿಗೆ ಜಗ್ಗದ ಪಂಜಶೀರ್ ಯೋಧರು | 600 ಕ್ಕೂ ಹೆಚ್ಚು ತಾಲಿಬಾನಿಗಳ ಸದೆಬಡಿದ ಕಮಾಂಡರ್​ ಅಹ್ಮದ್​ ಮಸೂದ್​ ಪಡೆ

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಸರ್ಕಾರ ರಚನೆ ಕಸರತ್ತು ಮುಂದುವರೆದಿದೆ. ಇದರ ನಡುವೆ ಪಂಜಶೀರ್ ಪ್ರಾಂತ್ಯ ಈದೀಗ ತಾಲಿಬಾನಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಅಫ್ಘಾನಿಸ್ತಾನದ ಎಲ್ಲಾ ಪ್ರದೇಶಗಳು ತಾಲಿಬಾನಿಗಳ ವಶವಾಗಿದ್ದರೂ ಈಶಾನ್ಯ ಪ್ರಾಂತ್ಯ ಪಂಜಶೀರ್​​ ಮಾತ್ರ ದಕ್ಕುತ್ತಿಲ್ಲ. ಪಂಜಶೀರ್​​ನ್ನು ವಶಪಡಿಸಿಕೊಂಡಿದ್ದಾಗಿ ತಾಲಿಬಾನಿಗಳು ಒಂದೆಡೆ ಹೇಳುತ್ತಿದ್ದಾರೆ. ಆದರೂ, ಸ್ಥಳೀಯ ಪ್ರತಿರೋಧಕ ಪಡೆ ನ್ಯಾಷನಲ್​ ರೆಸಿಸ್ಟೆನ್ಸ್​ ಫ್ರಂಟ್ ಆಫ್​ ಅಫ್ಘಾನಿಸ್ತಾನದ ಸಿಬ್ಬಂದಿ ಅದನ್ನು ಒಪ್ಪುತ್ತಿಲ್ಲ.

ತಾವೂ ಉಗ್ರರನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಿದ್ದೇವೆ. ಪಂಜಶೀರ್ ನಮ್ಮ ಬಳಿಯೇ ಇದೆ ಎಂದು ಹೇಳುತ್ತಿದ್ದಾರೆ. ನಾವು ಪಂಜಶೀರ್​ ಪ್ರಾಂತ್ಯದ ರಾಜಧಾನಿ ಬಜಾರಕ್​​ಗೆ ತಲುಪಿದ್ದೇವೆ. ಅಲ್ಲಿನ ಪ್ರಾಂತೀಯ ಗವರ್ನರ್​ ಕಚೇರಿಯನ್ನು ವಶಪಡಿಸಿಕೊಂಡಿದ್ದೇವೆ ಎಂದು ತಾಲಿಬಾನಿಗಳು ಹೇಳಿದ್ದರು. ಆದರೆ, ಸ್ಥಳೀಯ ಹೋರಾಟಗಾರರು ಇದನ್ನು ಸುಳ್ಳು ಎಂದಿದ್ದಾರೆ. ಪಂಜಶೀರ್​ ಮತ್ತು ಕಪಿಸಾ ಪ್ರಾಂತ್ಯಗಳ ಗಡಿಯಿಂದಲೇ ತಾಲಿಬಾನಿಗಳನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಹೇಳಿದ್ದಾರೆ.

ಅಫ್ಘಾನ್​ ನ್ಯಾಷನಲ್​​ ರೆಸಿಸ್ಟೆನ್ಸ್​ ಪಡೆಯ ವಕ್ತಾರ ಫಾಹಿಮ್​ ದಷ್ಟಿ ಟ್ವೀಟ್​ ಮಾಡಿ, ನಾವು ಪಂಜಶೀರ್​​ನ ವಿವಿಧ ಜಿಲ್ಲೆಗಳಲ್ಲಿ ಮುಂಜಾನೆಯಿಂದಲೂ ತಾಲಿಬಾನಿ ಉಗ್ರರ ವಿರುದ್ಧ ದಾಳಿ ನಡೆಸಿ, 600ಕ್ಕೂ ಹೆಚ್ಚು ಮಂದಿಯನ್ನು ಕೊಂದಿದ್ದೇವೆ. 1000ಕ್ಕೂ ಹೆಚ್ಚು ಭಯೋತ್ಪಾದಕರು ನಮ್ಮ ಸೆರೆಯಾಗಿದ್ದಾರೆ. ಇವರಲ್ಲಿ ಒಂದಷ್ಟು ಜನರು ಶರಣಾಗಿದ್ದರು ಎಂದು ಹೇಳಿದ್ದಾರೆ.

ಪಂಜಶೀರ್ ಉಳಿದ ಪ್ರಾಂತ್ಯಗಳಂತೆ ಅಲ್ಲ. ಇಲ್ಲಿ ಗಣಿಗಾರಿಕೆ ವ್ಯಾಪಕ ಆಗಿರುವುದರಿಂದ ತಾಲಿಬಾನ್​ ಉಗ್ರರಿಗೆ ಇಲ್ಲಿ ಹೋರಾಡಲು ಕಷ್ಟವಾಗುತ್ತಿದೆ. ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಬರಲೂ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಆ್ಯಂಟಿ ತಾಲಿಬಾನ್​ ಪ್ರತಿರೋಧಕ ಪಡೆಯ ಕಮಾಂಡರ್​ ಅಹ್ಮದ್​ ಮಸೂದ್​ ತಾಲಿಬಾನಿಗಳ ವಿರುದ್ಧ ಹೋರಾಟದಲ್ಲಿ ಗಟ್ಟಿಯಾಗಿ ಕಾಲೂರಿ ನಿಂತಿದ್ದಾರೆ. ಈ ಪಂಜಶಿರ್​ ವ್ಯಾಲಿಯನ್ನು ತಾಲಿಬಾನಿಗಳು ಆಕ್ರಮಿಸಿಕೊಳ್ಳಲು ಬಿಡುವುದಿಲ್ಲ. ನನ್ನ ಪ್ರಾಂತ್ಯವನ್ನು ಕಾಪಾಡಿಕೊಳ್ಳುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ.

ದೇವರು, ನ್ಯಾಯ ಮತ್ತು ಸ್ವಾತಂತ್ರ್ಯದ ಮೇಲೆ ನಂಬಿಕೆಯಿಟ್ಟು ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Leave A Reply

Your email address will not be published.