ಸುಳ್ಯ ತಾಲೂಕಿನ ದುಗಲಡ್ಕ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಕೊರೋನ ಲಸಿಕೆ ಶಿಬಿರದಲ್ಲಿ ಯುವಕನೋರ್ವನಿಗೆ ಆರೋಗ್ಯ ಸಹಾಯಕಿಯೊಬ್ಬರು ಕೆಲವೇ ಕ್ಷಣಗಳ ಅಂತರದಲ್ಲಿ ಎರಡು ಡೋಸ್ ಲಸಿಕೆ ನೀಡಿದ ಘಟನೆ ಬುಧವಾರ ನಡೆದಿದೆ.
ದುಗಲಡ್ಕ ಪ್ರೌಢಶಾಲೆಯಲ್ಲಿ ಕೋವಿಡ್ ಲಸಿಕೆ ಶಿಬಿರ ನಡೆಯುತ್ತಿದ್ದು, ಕೂಟೇಲು ಸಿ.ಆರ್.ಸಿ.ಯ ಬಾಲಸುಬ್ರಹ್ಮಣ್ಯಂ ಎಂಬವರ ಪುತ್ರ ಕೆ.ಬಿ.ಅರುಣ್ ಪ್ರಥಮ ಹಂತದ ಡೋಸ್ ಪಡೆಯಲು ಬಂದಿದ್ದರು. ಈ ಸಂದರ್ಭ ಆರೋಗ್ಯ ಸಹಾಯಕಿ ಅರುಣ್‌ರಿಗೆ ಲಸಿಕೆ ನೀಡಿದರೆನ್ನಲಾಗಿದೆ.
ಲಸಿಕೆ ತೆಗೆದುಕೊಂಡಿದ್ದರಿಂದ ಜ್ವರ ಬಂದರೆ ಇರಲೆಂದು ಮಾತ್ರೆ ತೆಗೆದುಕೊಳ್ಳುವ ಉದ್ದೇಶದಿಂದ ಅರುಣ್ ಅಲ್ಲೇ ಕುಳಿತಿದ್ದರು. ಈ ವೇಳೆ ಆರೋಗ್ಯ ಸಹಾಯಕಿ ಅವರಿಗೆ ಮತ್ತೊಮ್ಮೆ ಕೋವಿಡ್ ಲಸಿಕೆ ಚುಚ್ಚಿದ್ದಾರೆ ಎಂದು ಹೇಳಲಾಗಿದೆ.
ವಿಷಯ ತಿಳಿದ ಮನೆಯವರು ಆತಂಕಗೊಂಡು ಆರೋಗ್ಯ ಸಹಾಯಕಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್‌ರನ್ನು ಮನೆಯವರು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಈ ವೇಳೆ “ಆತಂಕ ಪಡಬೇಕಾಗಿಲ್ಲ, ಸರಿಯಾಗಿ ಆಹಾರ ಸೇವನೆ ಮಾಡಲಿ” ಎಂದು ಡಾ.ನಂದಕುಮಾರ್ ಸೂಚಿಸಿದರೆಂದು ತಿಳಿದುಬಂದಿದೆ.