ನಾಟಿ ಕೋಳಿಗೆ ಚೀಟಿ ಹರಿದ ಬಸ್ ಕಂಡಕ್ಟರ್ | KSRTC ಬಸ್ಸಿನಲ್ಲಿ ನಡೆಯಿತೊಂದು ಸ್ವಾರಸ್ಯಕರ ಪ್ರಕರಣ !

ಚಿಕ್ಕಬಳ್ಳಾಪುರ : ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್‌ನಲ್ಲಿ ಒಯ್ಯುತ್ತಿದ್ದ ನಾಟಿ ಕೋಳಿಗೆ ಕಂಡಕ್ಟರ್ ಚೀಟಿ ಹರಿದ ಸ್ವಾರಸ್ಯಕರ ಪ್ರಕರಣ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕೊಳಿಗೂ ಕೂಡಾ ಪ್ರಯಾಣಿಕರ ದರ ವಿಧಿಸಿ ಟಿಕೆಟ್‌ ನೀಡಿದ ಕಂಡಕ್ಟರ್‌ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ತಮಾಶೆಗೂ, ಜನರ ಅಸಮಾಧಾನಕ್ಕೂ ಕಾರಣವಾಗಿದೆ.
ಚಿಕ್ಕಬಳ್ಳಾಪುರ ಘಟಕದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪೆರೇಸಂದ್ರದಿಂದ ಗುಡಿಬಂಡೆ ತಾಲೂಕಿನ ಸೋಮೇಶ್ವರಕ್ಕೆ ಹೋಗುತ್ತಿದ್ದ ಪ್ರಯಾಣಿಕ ತನ್ನ ಜತೆ ಒಂದು ಪೊಗದಸ್ತಾದ ನಾಟಿ ಕೋಳಿ ಒಯ್ಯುತ್ತಿದ್ದ . ಈ ವೇಳೆ ಬಸ್ ನಿರ್ವಾಹಕ ಕೋಳಿಗೂ 5 ರೂ. ಟಿಕೆಟ್‌ ಪಡೆಯಬೇಕೆಂದು ಒತ್ತಾಯಿಸಿದ್ದಾನೆ. ಬಸ್ ಕಂಡಕ್ಟರ್‌ ಕೋಳಿಗೂ ಟಿಕೆಟ್‌ ನೀಡಿದ ಕೂಡಲೇ ಚುರುಕಾದ ಪ್ರಯಾಣಿಕ ತನ್ನ ಕೋಳಿಯನ್ನು ಸೀಟ್‌ ಮೇಲೆ ಕೂರಿಸಿದ್ದಾರೆ. ಟಿಕೆಟ್‌ ಪಡೆದ ಮಾಲೀಕ ಸಿಟ್ಟಿನಿಂದ ಕೋಳಿಯನ್ನು ಸೀಟ್‌ ಮೇಲೆ ಕೂರಿಸಿ ಪ್ರಯಾಣ ಬೆಳೆಸಿದ ಫೋಟೋ ಮತ್ತು ಸುದ್ದಿ ಇಂದಿನ ವೈರಲ್ ಮ್ಯಾಟರ್.

ಬಸ್ಸಿಗೆ ಹತ್ತಿದ ಪ್ರಯಾಣಿಕರು ಕೋಳಿ ತೆಗೆದು ಸೀಟ್‌ ಬಿಟ್ಟು ಕೊಡಿ ಎಂದು ಕೇಳಿದಾಗ, ‘ನಾನು ಟಿಕೆಟ್‌ ಪಡೆದಿದ್ದೇನೆ. ಹಾಗಾಗಿ ಕೋಳಿಯನ್ನು ನನ್ನ ಜತೆ ಸೀಟ್‌ನಲ್ಲಿ ಕೂರಿಸಿದ್ದೇನೆ’ ಎಂದು ಪ್ರಯಾಣಿಕ ಉತ್ತರಿಸಿದ್ದಾನೆ. ಜನರು ಕೂಡ ಈ ಘಟನೆಯನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ.

ಸದ್ಯ ಬಸ್‌ ಕಂಡಕ್ಟರ್ ಕೋಳಿಗೆ ಟಿಕೆಟ್ ನೀಡಿದ ಈ ಸುದ್ದಿಯ ಜತೆಗೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಠಾಣೆ ವ್ಯಾಪ್ತಿಯ ಪೆರೇಸಂದ್ರದ ವ್ಯಕ್ತಿ ನಾಟಿ ಕೋಳಿ ಹುಂಜ ಖರೀದಿಸಿ, ಸೋಮೇಶ್ವರಕ್ಕೆ ಹೋಗಲು ಚಿಕ್ಕಬಳ್ಳಾಪುರ ಘಟಕದ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿದಾಗ ಇಷ್ಟೆಲ್ಲಾ ಬೆಳವಣಿಗೆ ನಡೆದಿದೆ. ಪೆರೇಸಂದ್ರದ ವ್ಯಕ್ತಿಗೆ ಕಂಡಕ್ಟರ್‌ 10 ರೂ. ಟಿಕೆಟ್‌ ನೀಡಿದರೆ, ಕೋಳಿ ಹುಂಜಕ್ಕೆ 5 ರೂ. ಟಿಕೆಟ್‌ ನೀಡಿದ್ದಾನೆ. ಬಸ್ ಟಿಕೆಟ್ ಪಡೆದು ಪ್ರಯಾಣಿಸಿದ ಕೋಳಿ, ತಾನು ಕಾಯುವ ಕೆಲವೇ ಗಂಟೆಗಳ ಮುಂಚೆ ರಾಜಾತಿಥ್ಯ ಅನುಭವಿಸಿದೆ.
ಈ ಪೋಟೊಗಳು ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿ ಭಾರೀ ಸುದ್ದಿಯಾಗಿದೆ.

Leave A Reply

Your email address will not be published.