‘ಗೂಗಲ್ ಪೇ’ ಬಳಕೆದಾರರಿಗೆ ಸಿಹಿ ಸುದ್ದಿ | ಇನ್ನು ಮುಂದೆ ಗೂಗಲ್ ಪೇ ಮೂಲಕ ಎಫ್ ಡಿ ತೆರೆಯಲು ಅವಕಾಶ

ಇದೀಗ ‘ಗೂಗಲ್ ಪೇ’ ಆಪ್ ಬಳಕೆದಾರರಿಗೆ ಭರ್ಜರಿಯಾದ ಹೊಸ ಸೇವೆಯೊಂದು ಬಂದಿದ್ದು, ಇನ್ನು ಮುಂದೆ ನಿಶ್ಚಿತ ಠೇವಣಿ (ಎಫ್ ಡಿ) ತೆರೆಯಲು ಶೀಘ್ರವೇ ಅವಕಾಶ ನೀಡಲಿದೆ.

ಗೂಗಲ್ ಪೇ ದೇಶದಲ್ಲಿ ಡಿಜಿಟಲ್ ಪಾವತಿಗಳಿಗೆ ಜನಪ್ರಿಯ ವೇದಿಕೆಯಾಗಿದ್ದು, ಈ ಆಪ್ ಭಾರತದಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 10 ಕೋಟಿಗೂ ಅಧಿಕ ಡೌನ್‌ಲೋಡ್‌ಗಳನ್ನು ಮಾಡುವ ಮೂಲಕ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಇದರ ಸೇವೆಗಳ ಪಟ್ಟಿಯೂ ಹೆಚ್ಚಾಗುತ್ತಾ ಜನರ ಸೇವೆಗೆ ಅವಕಾಶ ನೀಡುತ್ತಿದ್ದು, ಇದೀಗ ಮತ್ತೊಂದು ಸೇವೆಯನ್ನು ಒದಗಿಸಿದೆ.

ಭಾರತೀಯ ಫಿನ್‌ಟೆಕ್ ಸ್ಟಾರ್ಟಪ್ ಕಂಪೆನಿ ಸೇತು ಜೊತೆಗೆ ಗೂಗಲ್ ಇತ್ತೀಚೆಗೆ ಘೋಷಿಸಿದ ಪಾಲುದಾರಿಕೆಯ ಭಾಗವಾಗಿ ಈ ಸೇವೆ ಬರುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿದೆ.

ಆನ್‌ಲೈನ್ ಪಾವತಿ ಸೇವೆಯಲ್ಲಿ ಜನಪ್ರಿಯವಾಗಿರುವ ಪ್ರತಿಷ್ಠಿನ ಗೂಗಲ್ ಕಂಪೆನಿ ಒಡೆತನದ ‘ಗೂಗಲ್ ಪೇ’ ಆಪ್ ಇದೀಗ ಹೊಸದೊಂದು ವಿಶೇಷ ಸೇವೆ ನೀಡಲು ಮುಂದಾಗಿದ್ದು, ಡಿಜಿಟಲ್ ಪಾವತಿ ಆಪ್ ಗೂಗಲ್ ಪೇ ಮೂಲಕ ನೀವು ನಿಮ್ಮ ಹಣವನ್ನು ಗೂಗಲ್ ಪೇನಲ್ಲಿ ಫಿಕ್ಸೆಡ್ ಇಟ್ಟು ಅದಕ್ಕೆ ಬಡ್ಡಿಯನ್ನು ಪಡೆಯಬಹುದಾಗಿದೆ.

ಗೂಗಲ್ ಪೇ ಆರಂಭದಲ್ಲಿ ತನ್ನ ಬಳಕೆದಾರರ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಎಫ್‌ಡಿಗಳನ್ನು ಒಂದು ವರ್ಷದವರೆಗೆ ನೀಡುತ್ತದೆ ಎಂದು ಸೂಚಿಸುತ್ತದೆ. ನಂತರ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕೂಡ ಶೀಘ್ರದಲ್ಲೇ ಪಟ್ಟಿಗೆ ಸೇರುವ ನಿರೀಕ್ಷೆಯಿದೆ.

ಗೂಗಲ್ ಪೇನಲ್ಲಿ ಫಿಕ್ಸೆಡ್ ಡೆಪಾಸಿಟ್ ಗರಿಷ್ಠ ಬಡ್ಡಿದರವನ್ನು ಶೇಕಡಾ 6.35 ಕ್ಕೆ ನಿಗದಿಪಡಿಸಲಾಗಿದ್ದು, ವರದಿಯ ಪ್ರಕಾರ, ಕಂಪನಿಯು ಈಗಾಗಲೇ ಆಪ್‌ನಲ್ಲಿ ಪರೀಕ್ಷಾ ಆವೃತ್ತಿಯನ್ನು ರಚಿಸಿದ್ದು ಅದು ಎಫ್‌ಡಿಗಳಿಗಾಗಿ ವಿವಿಧ ಅವಧಿಗಳನ್ನು ನೀಡುತ್ತದೆ.ಇವುಗಳಲ್ಲಿ 7-29 ದಿನಗಳು, 30-45 ದಿನಗಳು, 46-90 ದಿನಗಳು, 91-180 ದಿನಗಳು, 181-364 ದಿನಗಳು ಮತ್ತು 365 ದಿನಗಳಿದ್ದು, ಶೇಕಡಾ 3.5 ಕಡಿಮೆ ಬಡ್ಡಿದರದೊಂದಿಗೆ ರಿಂದ ಶೇ 6.35 % ವರೆಗೆ ಬಡ್ಡಿದರಗಳು ಸೇರಿವೆ.

ಗೂಗಲ್ ಪೇ ಬಳಕೆದಾರರು ಆಧಾರ್ ಆಧಾರಿತ KYC ಪ್ರಕ್ರಿಯೆಯನ್ನು ಅನುಸರಿಸಿ ಸೈನ್ ಅಪ್ ಮಾಡಬೇಕಾಗುತ್ತದೆ. ಇದನ್ನು ಒನ್-ಟೈಮ್ ಪಾಸ್‌ವರ್ಡ್ (OTP) ಮೂಲಕ ಸಕ್ರಿಯಗೊಳಿಸಲಾಗುತ್ತದೆ. ಒಮ್ಮೆ ಫಿಕ್ಸೆಡ್ ಇಟ್ಟಿರುವ ಹಣಕ್ಕೆ ವಾಯಿದೆ ಮುಗಿದ ನಂತರವಷ್ಟೇ ಬಡ್ಡಿಯ ಹಣ ಸಿಗಲಿದೆ. ಮುಂಚಿತವಾಗಿ ಹಣ ಪಡೆದುಕೊಂಡರೆ ಹೆಚ್ಚುವರಿ ಇಂಟ್ರೆಸ್ಟ್ ಹಣ ಸಿಗುವುದಿಲ್ಲ.

ಈಗಾಗಲೇ ಗೂಗಲ್ ಪೇ ಆಪ್‌ ಮೂಖಾಂತರವೇ ಚಿನ್ನವನ್ನು ಖರೀದಿಸಬಹುದಾದ, ರೇಲ್ವೆ ಟಿಕೆಟ್ ಬುಕ್ಕಿಂಗ್ ಮಾಡುವ ಸೌಲಭ್ಯಗಳನ್ನು ಒದಗಿಸುತ್ತಿರುವ ಗೂಗಲ್, ಇದೀಗ ನಿಶ್ಚಿತ ಠೇವಣಿ (ಎಫ್ ಡಿ) ತೆರೆಯಲು ಶೀಘ್ರವೇ ಅವಕಾಶ ನೀಡುವ ಮೂಲಕ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.

Leave A Reply

Your email address will not be published.