ಕಾಞಂಗಾಡ್-ಕಾಣಿಯೂರು ರೈಲ್ವೇ ಯೋಜನೆ ಮತ್ತೆ ಮರುಜೀವ ನೀಡಲು ಮುಂದಾದ ಕೇರಳ ಸರ್ಕಾರ

ಕಡಬ: ಕೇರಳ –ಕರ್ನಾಟಕ ಎರಡು ರಾಜ್ಯಗಳನ್ನು ಬೆಸೆಯುವ ಕಾಞಂಗಾಡ್-ಕಾಣಿಯೂರು ರೈಲ್ವೇ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದೆ. ಕೇರಳ ಸರ್ಕಾರ ಯೋಜನೆ ಮುಂದುವರಿಸಲು ಪ್ರಯತ್ನ ನಡೆಸಲಿದೆ ಎಂದಿದೆ.
ವಾಣಿಜ್ಯ, ಪ್ರವಾಸೋದ್ಯಮ ಮಂತಾದ ಕಾರಣಗಳಿಂದ ಈ ರೈಲ್ವೆ ಯೋಜನೆ ದಶಕಗಳ ಹಿಂದೆ ಪ್ರಸ್ತಾಪಗೊಂಡಿತು. ಇದೀಗ ಕೇರಳ ರಾಜ್ಯದ ಕಾಞಂಗಾಡ್ ಕರ್ನಾಟಕ ರಾಜ್ಯದ ದ.ಕ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರು ನಡುವಿನ ೯೨ ಕಿಲೋಮೀಟರ್ ಉದ್ದದ ಈ ರೈಲ್ವೇ ಯೋಜನೆಯನ್ನು ಮುಂದುವರಿಸಲು ಎಲ್ಲಾ ಕ್ರಮಗಳನ್ನೂ ಕೈಗೊಳ್ಳುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇತ್ತೀಚೆಗೆ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ. ಯೋಜನೆಯ ಬಗ್ಗೆ ಕಾಞಂಗಾಡಿನ ಶಾಸಕ ಇ.ಚಂದ್ರಶೇಖರನ್ ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ ಯೋಜನೆಗಳಲ್ಲಿ ಅನುಷ್ಠಾನಕ್ಕೆ ಅತೀ ಸಾಧ್ಯತೆ ಇರುವ ಯೋಜನೆ ಇದಾಗಿದೆ. 2019-20ನೇ ಬಜೆಟ್‌ನಲ್ಲಿ ಕೇರಳದ ಭಾಗದಲ್ಲಿ ಯೋಜನೆಯ ಭೂ ಸ್ವಾಧೀನ ಮತ್ತಿತರ ಪ್ರಕ್ರಿಯೆಗಳಿಗೆ 20ಕೋಟಿ ರೂ ಅನುದಾನ ಮೀಸಲಿರಿಸಿತ್ತು. ಇದರ ಪ್ರಕ್ರಿಯೆ ಮುಂದುವರಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

2006-08ವರ್ಷದಲ್ಲಿ ಕಾಞಂಗಾಡ್-ಕಾಣಿಯೂರು ರೈಲ್ವೇ ಹಳಿ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ನಡೆಸಿದ ಪ್ರಯತ್ನದ ಹಿನ್ನಲೆಯಲ್ಲಿ ಅಂದಿನ ರೈಲ್ವೇ ಸಚಿವರಾಗಿದ್ದ ಲಾಲೂ ಪ್ರಸಾದ್ ಯಾದವ್ 2008-09ರ ರೈಲ್ವೇ ಬಜೆಟ್‌ನಲ್ಲಿ ಹಳಿಯ ಸರ್ವೆಗೆ ಅನುದಾನ ಮೀಸಲಿರಿಸಿತ್ತು. ಅದರಂತೆ ಪ್ರಥಮ ಹಂತದಲ್ಲಿ ಕಾಞಂಗಾಡ್‌ನಿಂದ ಪಾಣತ್ತೂರುವರೆಗೆ 41 ಕಿ.ಮಿ.ಹಳಿಯ ಸಮೀಕ್ಷೆ ನಡೆಸಲಾಯಿತು. 2010-11ರ ಬಜೆಟ್‌ನಲ್ಲಿ ಎರಡನೇ ಹಂತದಲ್ಲಿ ಪಾಣತ್ತೂರಿನಿಂದ ಕಾಣಿಯೂರು ತನಕ 51 ಕಿ.ಮಿ. ಸರ್ವೆಗೆ ಅನುದಾನ ಮೀಸಲಿರಿಸಿದರೂ ಸರ್ವೆ ನಡೆಯಲಿಲ್ಲ.2012-13ರಲ್ಲಿಯೂ ಸರ್ವೆ ನಡೆಸಲು ಆದೇಶ ನೀಡಿದರೂ ಕೈಗೂಡಿಲ್ಲ.
ಬಳಿಕ ಡಿ.ವಿ.ಸದಾನಂದ ಗೌಡ ರೈಲ್ವೇ ಸಚಿವರಾಗಿ ಮಂಡಿಸಿದ 2014-15ನೇ ಸಾಲಿನ ರೈಲ್ವೇ ಬಜೆಟ್‌ನಲ್ಲಿ ಕಾಞಂಗಾಡ್‌ನಿಂದ ಕಾಣಿಯೂರುವರೆಗೆ ಪೂರ್ತಿ ಸರ್ವೆ ನಡೆಸಲು ಅನುದಾನ ಮೀಸಲಿಸಿದರು. ಅದರಂತೆ ೨೦೧೫ಮಾರ್ಚ್ ನಲ್ಲಿ ಯೋಜನೆಯ ಸಮೀಕ್ಷೆ ಪೂರ್ತಿ ಮಾಡಿ ವರದಿ ಸಲ್ಲಿಸಲಾಗಿದೆ. ಬಳಿಕ ರಾಜ್ಯ ಸರ್ಕಾರಗಳ ಪಾಲುದಾರಿಕೆಯ ಒಪ್ಪಿಗೆ ನೀಡುವ ಮತ್ತಿತರ ಕಾರ್ಯಗಳು ಪೂರ್ತಿಯಾಗದ ಕಾರಣ ಯೋಜನೆಯ ಕೆಲಸ ಮುಂದೆ ಸಾಗಿಲ್ಲ.
1300 ಕೋಟಿ ಯೋಜನೆ:
2015ರಲ್ಲಿ ಯೋಜನೆಯ ಸಮೀಕ್ಷೆ ಪೂರ್ತಿಗೊಂಡಾಗ ಅನುಷ್ಠಾನಕ್ಕೆ 1300 ಕೋಟಿ ರೂ ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಕೇಂದ್ರ ಸರ್ಕಾರ, ಕೇರಳ ಮತ್ತು ಕರ್ನಾಟಕ ಸರ್ಕಾರ ಪಾಲುದಾರಿಕೆಯಲ್ಲಿ ಯೋಜನೆ ನಿರ್ವಹಿಸಬಹುದು ಎಂಬುದು ಕೇಂದ್ರ ಸರ್ಕಾರದ ನಿಲುವು. ಕಾಞಂಗಾಡ್‌ನಿಂದ ಪಾಣತ್ತೂರುವರೆಗೆ 41ಕಿ.ಮಿ. ಮತ್ತು ಪಾಣತ್ತೂರಿನಿಂದ ಕಾಣಿಯೂರಿಗೆ 51 ಕಿ.ಮಿ. ಒಟ್ಟು 92 ಕಿ.ಮಿ. ಉದ್ದದ ಹಳಿ ನಿರ್ಮಿಸಿ ರೈಲ್ವೇ ಸಂಪರ್ಕ ಸಾಧಿಸುವುದು ಯೋಜನೆಯ ಉದ್ದೇಶ.

ಕಾಞಂಗಾಡ್‌ನಿAದ ಕೊಟ್ಟೋಡಿ, ಬಳಾಂತೋಡ್, ಪಾಣತ್ತೂರು, ಕಲ್ಲಪಳ್ಳಿ, ಆಲೆಟ್ಟಿ, ಸುಳ್ಯ ಮೂಲಕ ಕಾಣಿಯೂರಿನಲ್ಲಿ ಮಂಗಳೂರು-ಬೆಂಗಳೂರು ಹಳಿಯನ್ನು ಸಂಧಿಸಿ ರೈಲ್ವೇ ಸಂಪರ್ಕ ಸಾಧಿಸಲು ಯೋಜನೆ ರೂಪಿಸಲಾಗಿದೆ. ಕಾಞಂಗಾಡ್‌ನಿಂದ ಪಾಣತ್ತೂರುವರೆಗೆ ಹೆದ್ದಾರಿಗೆ ಸಮಾನಾಂತರವಾಗಿ ಬರುವ ಹಳಿಯು ಪಾಣತ್ತೂರಿನಿಂದ ಬೆಟ್ಟ ಗುಡ್ಡಗಳ ಮೂಲಕ ಹಾದು ಸುಳ್ಯಕ್ಕೆ ಬರಲಿದೆ.

Ad Widget
Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: