ಬ್ಯಾಂಕಿನಿಂದ ಪಡೆದ ಸಾಲ ಮರುಪಾವತಿಸಲು ಕರೆ ಮಾಡಿದ ಸಿಬ್ಬಂದಿ | ಸಿಬ್ಬಂದಿಗೆ ನಿಂದಿಸಿ ಕೊಲೆ ಬೆದರಿಕೆ ಹಾಕಿದ ಗ್ರಾಹಕ

ಉಡುಪಿ : ಬ್ಯಾಂಕಿನಿಂದ 25 ಸಾವಿರ ರೂ. ಸಾಲ ಪಡೆದು ಬಳಿಕ ಮರುಪಾವತಿಸದೇ ಸತಾಯಿಸುತ್ತಿದ್ದ ವ್ಯಕ್ತಿಗೆ ಸಾಲ ಮರುಪಾವತಿಸುವಂತೆ ಕೇಳಿಕೊಂಡಾಗ ಸಿಟ್ಟಿಗೆದ್ದ ಆತ ಬ್ಯಾಂಕಿನ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆಯೊಡ್ಡಿರುವ ಕುರಿತು ಉಡುಪಿ ಜಿಲ್ಲೆಯ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾರ್ಕಳ ತಾಲೂಕಿನ ಬೈಲೂರು ನಿವಾಸಿ ಶೇಖರ ಎಂಬವರು ಬೈಲೂರು ಎಸ್ ಸಿ ಡಿಸಿಸಿ ಬ್ಯಾಂಕಿನಲ್ಲಿ ಹಿರಿಯ ಮೇಲ್ವಿಚಾರಕರಾಗಿದ್ದ ಸಂದರ್ಭದಲ್ಲಿ ತನ್ನ ಪರಿಚಯಸ್ಥ ಸುಕೀರ್ತಿ ಎಂಬವರಿಗೆ 25 ಸಾವಿರ ರೂ. ಸಾಲ ನೀಡಿದ್ದರು. ಸಾಲ ಪಡೆದ ಸುಕೀರ್ತಿ ಮರುಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕಿನ ಸಿಬ್ಬಂದಿ ಸಾಲ ಕಟ್ಟುವಂತೆ ಸಾಕಷ್ಟು ಬಾರಿ ವಿನಂತಿಸಿಕೊಂಡಿದ್ದರು. ನಂತರದಲ್ಲಿ ಶೇಖರ ಬೈಲೂರು ಶಾಖೆಯಿಂದ ಬೆಳುವಾಯಿ ಶಾಖೆಗೆ ವರ್ಗಾವಣೆಗೊಂಡಿದ್ದರು. ಬೈಲೂರು ಶಾಖೆಯಲ್ಲಿ ಸಾಲ ಪಡೆದ ಸುಕೀರ್ತಿ ಮಂಗಳವಾರ ಶೇಖರ್ ಗೆ ಕರೆ ಮಾಡಿ ಸಾಲ ಪಾವತಿಸುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಶೇಖರ್ ಈ ಬಗ್ಗೆ ಪರಿಶೀಲಿಸಿ ಸಾಲದ ಬಾಕಿ ಮೊತ್ತ ತಿಳಿಸಿದ್ದರು.

ಮಂಗಳವಾರ ಸಂಜೆ ಶೇಖರ್ ಅವರು ಸುಕೀರ್ತಿಗೆ ಕರೆ ಮಾಡಿ ಸಾಲ ಕಟ್ಟಿದ್ದೀರಾ ಎಂದು ಕೇಳಿದ್ದರು. ಇದಾದ ಬಳಿಕ ಶೇಖರ್ ಕೆಲಸ ಮುಗಿಸಿ ಬೈಲೂರಿಗೆ ಬಂದು ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿದ ವೇಳೆ ಕಾರಿನಲ್ಲಿ ಬಂದ ಸುಕೀರ್ತಿ ಹಾಗೂ ಆತನ ತಂಡವು ಏಕಾಏಕಿ ಕಾರಿನಿಂದ ಇಳಿದು ಬೆದರಿಕೆಯೊಡ್ಡಿರುತ್ತಾರೆ.

ಈ ಪೈಕಿ ಜಗದೀಶ್ ಪೂಜಾರಿ ಎಂಬಾತ ಶೇಖರ್ ಅವರನ್ನು ಉದ್ದೇಶಿಸಿ ನೀನು ಸುಕೀರ್ತಿ ಗೆ ಭಾರೀ ಬೈಯುತ್ತೀಯಾ ಎಂದು ಅವಾಚ್ಯ ಪದಗಳಿಂದ ನಿಂದಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ದೂರಿನಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.