ಉಡುಪಿ | ಪ್ರತಿಷ್ಠಿತ ಉದ್ಯಮಿ ಬಿ.ಆರ್ ಶೆಟ್ಟಿ ಗ್ರೂಪ್ ನಡೆಸುತ್ತಿರುವ ಆಸ್ಪತ್ರೆಯ ಸಿಬ್ಬಂದಿಗಳಿಗೆ ನೀಡುತ್ತಿಲ್ಲ ಸಂಬಳ !? | ಇದನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸುತ್ತಿದ್ದ 16 ಸಿಬ್ಬಂದಿಗಳನ್ನು ವಜಾ ಮಾಡಿದ ಆಡಳಿತ ಮಂಡಳಿ !!
ಉಡುಪಿ: ಉದ್ಯಮಿ ಬಿ.ಆರ್. ಶೆಟ್ಟಿ ಗ್ರೂಪ್ ನಡೆಸುತ್ತಿರುವ ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉಡುಪಿ ಬಾಕಿ ಇಟ್ಟಿರುವ ಸಂಬಳವನ್ನು ನೀಡುವಂತೆ ಹೋರಾಟ ಮಾಡುತ್ತಿರುವ ಪ್ರಮುಖ 16 ಮಂದಿ ನೌಕರರನ್ನು ಆಡಳಿತ ಮಂಡಳಿ ಏಕಾಏಕಿ ವಜಾಗೊಳಿಸಿದೆ ಎಂದು ಆರೋಪಿಸಿ ಆಸ್ಪತ್ರೆಯ ಸಿಬ್ಬಂದಿ ಆಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
ಮಂಗಳವಾರ ಸಂಜೆ 4.30 ಕ್ಕೆ ಆಡಳಿತ ಮಂಡಳಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ 16 ಮಂದಿಯನ್ನು ಕೋವಿಡ್-19 ಆರ್ಥಿಕ ಅಡಚಣೆ ಕಾರಣ ಕೊಟ್ಟು ಕೆಲಸದಿಂದ ವಜಾಗೊಳಿಸಿದೆ. ಇದರಿಂದ ಕೋಪಗೊಂಡ 180 ಮಂದಿ ಸಿಬ್ಬಂದಿಯೂ ಮಂಗಳವಾರ ಸಂಜೆಯಿಂದಲೇ ಪ್ರತಿಭಟನೆ ಕುಳಿತುಕೊಂಡಿದ್ದು, ಅಹೋರಾತ್ರಿ ಪ್ರತಿಭಟನೆ ನಡೆಸಿದರು.
ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಐವರು ಡ್ಯೂಟಿ ಡಾಕ್ಟರ್ ಸಹಿತ 180 ಮಂದಿ ಸಿಬ್ಬಂದಿ ವೃಂದಕ್ಕೆ ಕಳೆದ ಮೇ, ಜೂನ್, ಜುಲೈ ತಿಂಗಳ ಸಂಬಳವನ್ನು ಆಡಳಿತ ಮಂಡಳಿ ಬಾಕಿ ಇಟ್ಟಿದೆ. ಈ ಸಂಬಳ ನೀಡುವಂತೆ ಸಿಬ್ಬಂದಿ ಮುಷ್ಕರ ನಡೆಸಿದ್ದರು.
ಈ ವೇಳೆ ಸುವರ್ಣ ಆರೋಗ್ಯ ಕರ್ನಾಟಕ ಟ್ರಸ್ಟ್ನಿಂದ 50 ಲಕ್ಷ ರೂ. ಬಿಡುಗಡೆಗೊಳಿಸಿದ್ದು, ನೌಕರರ ವೇತನ ನೀಡುವಂತೆ ಷರತ್ತು ವಿಧಿಸಲಾಗಿತ್ತು. ಆದರೆ ಆಡಳಿತ ಮಂಡಳಿ ಮೇ ತಿಂಗಳ ಶೇ. 60 ರಷ್ಟು ವೇತನ ಮಾತ್ರವೇ ಪಾವತಿ ಮಾಡಿ 27 ಲಕ್ಷ ರೂ. ವನ್ನು ಬಾಕಿ ಇಟ್ಟುಕೊಂಡಿದ್ದಾರೆ ಎಂದು ನೌಕರರು ದೂರಿದರು.
ಮೇ ಹಾಗೂ ಜೂನ್ ತಿಂಗಳ ಸಂಬಳ ಪಾವತಿ ಮಾಡುತ್ತೇವೆ. ಆಗಸ್ಟ್ನಲ್ಲಿ ಸರಕಾರ ನಿರ್ಧಾರ ತೆಗೆದುಕೊಂಡು ಸೆಪ್ಟೆಂಬರ್ ಬಳಿಕ ಎಲ್ಲಾ ನಿರ್ಧಾರ ಮಾಡುವುದಾಗಿ ಶಾಸಕರು ಭರವಸೆ ಕೊಟ್ಟಿದ್ದರು. ಆದರೆ ಆಡಳಿತ ಮಂಡಳಿ ಮಂಗಳವಾರ ಸಂಜೆ ಯಾವುದೇ ನೋಟಿಸ್ ಕೊಡದೇ ಏಕಾಏಕಿಯಾಗಿ 2 ಡ್ಯೂಟಿ ಡಾಕ್ಟರ್ , 2 ರಿಸೆಪ್ಷೆನಿಸ್ಟ್ , 3 ನಿರ್ವಹಣೆ ವಿಭಾಗ , 2 ಲ್ಯಾಬೋರೇಟರಿ , 2 ಹೌಸ್ ಕೀಪಿಂಗ್ , 1 ಟ್ರಾನ್ಸ್ಪೋರ್ಟ್ ವಿಭಾಗ, 1 ಸಿಎಸ್ಎಸ್ಡಿ, 2 ಸೆಕ್ಯುರಿಟಿ, ನರ್ಸಿಂಗ್ ವಿಭಾಗದ ಇಬ್ಬರು ಸಹಿತ ಒಟ್ಟು 16 ಮಂದಿಯನ್ನು ವಜಾಗೊಳಿಸಲಾಗಿದೆ.
ಆಸ್ಪತ್ರೆಯ ಯಾವ ರೋಗಿಗೂ ತೊಂದರೆಯಾಗದಂತೆ ಮುಷ್ಕರ ಮಾಡುತ್ತಿದ್ದೇವೆ. ನಮಗೆ ನ್ಯಾಯಬೇಕೆಂದು ನೌಕರರು ತಿಳಿಸಿದ್ದಾರೆ. ಮುಷ್ಕರ ಕಂಡು ಆಡಳಿತ ಮಂಡಳಿ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.