ಮಂಗಳೂರು| ಕೊಲೆ, ದೊಂಬಿ ಪ್ರಕರಣದ ಆರೋಪಿಯನ್ನು ಸ್ಟ್ರೆಚರ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು | ಪೊಲೀಸರ ಈ ನಡೆಗೆ ಕೆಂಡಾಮಂಡಲರಾದ ನ್ಯಾಯಾಧೀಶರು

ಮಂಗಳೂರು: ಕೊಲೆ, ದೊಂಬಿ ಪ್ರಕರಣದ ಆರೋಪಿಯನ್ನು ನ್ಯಾಯಾಲಯಕ್ಕೆ ಸ್ಟ್ರೆಚರ್ ಮೂಲಕ ಹಾಜರುಪಡಿಸಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು ಪೊಲೀಸರನ್ನು ಜೋರಾಗಿಯೇ
ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಹಲವು ವರ್ಷಗಳ ಹಿಂದೆ ಅದ್ದೂರಿನ ಮಹಮ್ಮದ್ ಎಂಬಾತನ ಮೇಲೆ ಬಜಪೆ ಪೊಲೀಸ್ ಠಾಣೆಯಲ್ಲಿ ದೊಂಬಿ, ಕೊಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನಿಗೆ ಕೋರ್ಟ್‌ಗೆ ಹಾಜರಾಗುವಂತೆ ವಾರಂಟ್ ಕೂಡ ಹೊರಡಿಸಲಾಗಿತ್ತು.

ಆದರೆ ಅದ್ದೂರಿನ ಮಹಮ್ಮದ್ ಇದೀಗ ಅಸೌಖ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದು, ಆತನಿಂದ ಕುಟುಂಬ ವರ್ಗ ಕೂಡ ‌ದೂರವಾಗಿ ಅನಾಥವಾಗಿದ್ದ. ಈ ವಿಚಾರ ಅಪದ್ಭಾಂಧವ ಆಸೀಪ್ ಗಮನಕ್ಕೆ ಬಂದಿದ್ದು, ಕೂಡಲೆ ಅದ್ದೂರಿಗೆ ತೆರಳಿ ಮಹಮ್ಮದ್‌ನನ್ನು ಮೂಲ್ಕಿ ಕಾರ್ನಾಡುವಿನ ಅನಾಥಾಶ್ರಮಕ್ಕೆ ಸೇರಿಸಿ ಮೂರು ತಿಂಗಳಿನಿಂದ ಅವನಿಗೆ ‌ಚಿಕಿತ್ಸೆ ನೀಡಲಾಗುತ್ತಿತ್ತು.

Ad Widget
Ad Widget

Ad Widget

Ad Widget

ಆದರೆ ಹಳೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮ್ಮದ್‌ನನ್ನು ಆಗಸ್ಟ್ 12ರಂದು ಕೋರ್ಟ್‌ಗೆ ಹಾಜರುಪಡಿಸುವಂತೆ ಆಸೀಫ್‌ಗೆ ಪೊಲೀಸರು ತಿಳಿಸಿದ್ದರು. ಈ ವೇಳೆ ಆಸೀಫ್, ಮಹಮ್ಮದ್ ಅಸೌಖ್ಯದಿಂದ ಹಾಸಿಗೆ ಹಿಡಿದಿದ್ದು, ಕೋರ್ಟ್‌ಗೆ ಹಾಜರಾಗಲು ಕಷ್ಟ ಎಂದಿದ್ದರು. ಆದರೆ, ಪೊಲೀಸರು ಮಹಮ್ಮದ್ ಅನ್ನು ಕೋರ್ಟ್‌ಗೆ ಹಾಜರುಪಡಿಸಲೇಬೇಕು ಎಂದು ಒತ್ತಡ ಹಾಕಿದ್ದರು ಎನ್ನಲಾಗಿದೆ.

ಬೇರೆ ದಾರಿ ಇಲ್ಲದೆ, ಗುರುವಾರ ಆಸೀಫ್ ಅವರು ಮಹಮ್ಮದ್ ಅನ್ನು ಆಂಬ್ಯುಲೆನ್ಸ್‌ನಲ್ಲೇ ಜಿಲ್ಲಾ ನ್ಯಾಯಾಲಯಕ್ಕೆ ಕರೆದುಕೊಂಡು ಬಂದಿದ್ದು, ಸ್ಟ್ರೆಚರ್‌ನಲ್ಲೇ ಮಲಗಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು, ಆರೋಪಿಯ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಆರೋಪಿಯು ಅಸೌಖ್ಯದಿಂದ ಹಾಸಿಗೆ ಹಿಡಿದಿರುವಾಗ ಅವರನ್ನು ಇಂತಹ ಪರಿಸ್ಥಿತಿಯಲ್ಲಿ ಕೋರ್ಟ್‌ನ ಮುಂದೆ ಹಾಜರುಪಡಿಸುವ ಅವಶ್ಯಕತೆ ಏನಿತ್ತು? ಏಕೆ ಇಷ್ಟೊಂದು ಒತ್ತಡ ಹಾಕಿದ್ದೀರಿ? ಆರೋಪಿಯ ವಾಸ್ತವ ಸ್ಥಿತಿಯನ್ನು ವಿವರಿಸಿದರೆ ಸಾಕಿತ್ತಲ್ಲವೇ? ಎಂದು ಪೊಲೀಸರನ್ನು ಖಾರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.

ನಂತರ ಆರೋಪಿಯನ್ನು ಆಸೀಫ್ ಅವರು ಆಂಬ್ಯುಲೆನ್ಸ್‌ನಲ್ಲಿ ಮರಳಿ ಅನಾಥಾಶ್ರಮಕ್ಕೆ ಕರೆದೊಯ್ದಿದ್ದಾರೆ. ಆರೋಪಿ ಮಹಮ್ಮದ್‌ನ ಪರಿಸ್ಥಿತಿಯನ್ನು ಕಂಡ ವಕೀಲ ಫಾರೂಕ್, ಮುಂದಿನ ದಿನಗಳಲ್ಲಿ ಆರೋಪಿ ಪರ ಕೋರ್ಟ್‌ನಲ್ಲಿ ಉಚಿತ ವಕಾಲತ್ತು ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Leave a Reply

error: Content is protected !!
Scroll to Top
%d bloggers like this: