ಕಲ್ಲಿದ್ದಲು ತುಂಬಿದ್ದ ಲಾರಿಯಲ್ಲಿ ಬೆಂಕಿ | ಒಳಗೆ ನಿದ್ದೆ ಮಾಡುತ್ತಿದ್ದ ನಾಲ್ವರ ಜೀವ ಉಳಿಸಿದ ಧರ್ಮಸ್ಥಳ ಪೊಲೀಸರು !
ಮಂಗಳೂರಿನಿಂದ ಹಾಸನ ಕಡೆಗೆ ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ನಿನ್ನೆ ತಡರಾತ್ರಿ ನಡೆದಿದೆ.
ಲಾರಿಯಲ್ಲಿ ಮಂಗಳೂರಿನಿಂದ ಹಾಸನ ಕಡೆಗೆ ಕಲ್ಲಿದ್ದಲು ಸಾಗಾಟ ಮಾಡಲಾಗುತ್ತಿದ್ದು, ಚಾರ್ಮಾಡಿ ಘಾಟಿ ತಲುಪುವ ವೇಳೆ ತಡರಾತ್ರಿಯಾಗಿರುವ ಹಿನ್ನೆಲೆಯಲ್ಲಿ ಲಾರಿಯನ್ನು ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ನಿಲ್ಲಿಸಿದ್ದರು. ಚಾಲಕ ಸೇರಿದಂತೆ ಲಾರಿಯಲ್ಲಿದ್ದ ಇನ್ನೂ ಮೂವರು ಗಾಡಿಯೊಳಗೆ ನಿದ್ರಿಸಿದ್ದರು. ಆ ವೇಳೆ ವಾಹನದಲ್ಲಿದ್ದ ಕಲ್ಲಿದ್ದಲಿನ ಅಡಿಭಾಗದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.
ಇದನ್ನು ಮನಗಂಡ ಚೆಕ್ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಧರ್ಮಸ್ಥಳ ಪೊಲೀಸರು ಕೂಡಲೇ ಲಾರಿಯಲ್ಲಿದ್ದ ನಾಲ್ವರನ್ನೂ ಎಬ್ಬಿಸಿದ್ದಾರೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕದಳ ಹಾಗೂ ಧರ್ಮಸ್ಥಳ ಪೊಲೀಸರ ಸೂಕ್ತ ಕಾರ್ಯಾಚರಣೆಯಿಂದ ಬೆಂಕಿಯನ್ನು ನಂದಿಸಲಾಗಿದ್ದು, ಮುಂದಾಗಬಹುದಿದ್ದ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಲವು ಸಮಯಗಳ ಕಾಲ ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಠಾಣಾಧಿಕಾರಿ
ಎಂ.ಗೋಪಾಲ್, ಪ್ರಮುಖ ಅಗ್ನಿಶಾಮಕ ಕೃಷ್ಣ ನಾಯ್ಕ, ಚಾಲಕ ರತನ್, ಮಾರುತಿ ಟಿ.ಅರ್, ಚಾಕೋ.ಕೆ.ಜೆ, ವಿನೋದ್ ಬೆಂಕಿ ನಂದಿಸುವ ಕಾರ್ಯದಲ್ಲಿ ಸಹಕರಿಸಿದರು.