ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಸೈಲೆಂಟ್ ಸುನಿಲ ಸೇರಿದಂತೆ 45 ರೌಡಿಶೀಟರ್ಸ್ ಮನೆಗಳ ಮೇಲೆ ಮುಗಿಬಿದ್ದ ಸಿಸಿಬಿ ಪೊಲೀಸರು
ಬೆಂಗಳೂರು: ಬೆಂಗಳೂರಿನಲ್ಲಿ ದಿನೇದಿನೇ ರಾಜಧಾನಿಯಲ್ಲಿ ಕೊಲೆ, ಸುಲಿಗೆ ಪ್ರಕರಣಗಳು ಅಧಿಕವಾಗುತ್ತಿದ್ದು, ರೌಡಿ ಶೀಟರ್ಸ್ಗಳ ಅಟ್ಟಹಾಸಕ್ಕೆ ತುರ್ತಾಗಿ ಕಡಿವಾಣ ಹಾಕಲು ಬೆಂಗಳೂರು ಪೊಲೀಸರು ಸಜ್ಜಾಗಿದ್ದಾರೆ. ರೌಡಿಗಳ ಮೇಲೆ ನಿಗಾ ವಹಿಸುವಂತೆ ಪೊಲೀಸ್ ಕಮಿಷನರ್ ಕಮಲ್ ಪಂತ್ ಆದೇಶ ನೀಡಿದ ಬೆನ್ನಲ್ಲೇ 45ಕ್ಕೂ ಹೆಚ್ಚು ರೌಡಿಶೀಟರ್ಸ್ ಮನೆ ಮೇಲೆ ಸಿಸಿಬಿ ಪೊಲೀಸರು ಇಂದು ದಾಳಿ ಮಾಡಿದ್ದಾರೆ.
ಕೆಲ ತಿಂಗಳುಗಳ ಹಿಂದಷ್ಟೇ 2 ಸಾವಿರಕ್ಕೂ ಅಧಿಕ ರೌಡಿ ಶೀಟರ್ಸ್ ಮನೆ ಮೇಲೆ ದಾಳಿ ಮಾಡಿದ್ದ ಪೊಲೀಸರು ಇಂದು ಮತ್ತೊಮ್ಮೆ ಬಿಸಿ ಮುಟ್ಟಿಸಿದ್ದಾರೆ. ಮೊನ್ನೆ ರೌಡಿ ಶೀಟರ್ ಬಬ್ಲಿ ಹತ್ಯೆ ಆದ ನಂತರ ಪೊಲೀಸರು ಎಚ್ಚೆತ್ತು ಕೊಂಡಿದ್ದು, ಬೆಂಗಳೂರಿನ ಪಾತಕ ಲೋಕವನ್ನು ಕಂಟ್ರೋಲ್ ಮಾಡಲು ಕಟಿಬದ್ಧರಾಗಿದ್ದಾರೆ.
ರೌಡಿಶೀಟರ್ಸ್ ಹತ್ಯೆಯಾದರೆ ಆಯಾ ವ್ಯಾಪ್ತಿಯ ಇನ್ಸ್ಪೆಕ್ಟರ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಕಮಿಷನರ್ ಎಚ್ಚರಿಕೆ ನೀಡಿರುವುದರಿಂದ ಪೊಲೀಸರು ಅಖಾಡಕ್ಕಿಳಿದು ರೌಡಿ ಶೀಟರ್ಸ್ ಹಾಗೂ ಅವರ ಸಹಚರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಇಂದು ಬೆಂಗಳೂರಿನಲ್ಲಿ 45 ಮನೆಗಳ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಸೈಲೆಂಟ್ ಸುನಿಲ, ಜಿ.ಬಿ.ನಾರಾಯಣ್ ಸೇರಿದಂತೆ ಹಲವರ ಮನೆಗಳನ್ನು ಪರಿಶೀಲಿಸಿದ್ದಾರೆ. ಕೆಲವರ ಮನೆಗಳಲ್ಲಿ ಹಣ, ಮಾರಕಾಸ್ತ್ರಗಳು ಪತ್ತೆಯಾಗಿದ್ದು ಅದನ್ನು ವಶಕ್ಕೆ ಪಡೆದಿದ್ಧಾರೆ.
ಬೆಂಗಳೂರಲ್ಲಿ ಅಪರಾಧ ಪ್ರಕರಣಗಳನ್ನು ನಿಯಂತ್ರಣ ಮಾಡಬೇಕೆಂದು ಪಣ ತೊಟ್ಟಿರುವ ಪೊಲೀಸರು, ರೌಡಿಶೀಟರ್ಸ್ ಮೇಲೆ ನಿಗಾವಹಿಸಲು ಪ್ರತ್ಯೇಕ ತಂಡ ರಚಿಸಿಕೊಂಡಿದ್ದಾರೆ. ಆಯಾ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ 2 ಪ್ರತ್ಯೇಕ ತಂಡ ರಚಿಸಿ ಪ್ರತಿನಿತ್ಯ ರೌಡಿ ಆಸಾಮಿಗಳ ಮೇಲೆ ಕಣ್ಣಿಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ರೌಡೀಶೀಟರ್ ಗಳ ಪಿನ್ ಟು ಪಿನ್ ಮಾಹಿತಿ ಕಲೆ ಹಾಕಲಿರುವ ಪ್ರತ್ಯೇಕ ತಂಡಗಳು, ತಮ್ಮ ಠಾಣಾ ವ್ಯಾಪ್ತಿಯಲ್ಲಿರುವ ರೌಡಿಶೀಟರ್ಸ್ ಯಾರು? ಅವರ ವಿಳಾಸ, ಪ್ರಸ್ತುತ ಉದ್ಯೋಗ ಏನು? ಎಲ್ಲಿ ಕೆಲಸ ಮಾಡುತ್ತಿದ್ದಾರೆ? ಯಾರು ಕೆಲಸ ನೀಡಿದವರು? ಅವರ ಹಿನ್ನೆಲೆ ಏನು? ತಮ್ಮ ವ್ಯಾಪ್ತಿಯ ರೌಡಿಶೀಟರ್ಗಳ ವಿರೋಧಿ ಬಣದವರು ಯಾರು? ಅವರು ಎಲ್ಲಿದ್ದಾರೆ? ಹೀಗೆ ವಿವಿಧ ವಿಷಯಗಳನ್ನು ಸಂಗ್ರಹಿಸುತ್ತಿದ್ದಾರೆ.
ಜೈಲಿನಲ್ಲೇ ಗ್ಯಾಂಗ್ ಕಟ್ಟಿಕೊಂಡ ರೌಡಿಗಳು
ಒಂದೇ ಗ್ಯಾಂಗ್ಗೆ ಸೇರಿದ ಹಲವು ಮಂದಿ ಒಂದೆಡೆ ಸೇರಿ ಪಾತಕಗಳಿಗೆ ಸ್ಕೆಚ್ ಹಾಕುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಹೀಗಾಗಿ ಆ ಗ್ಯಾಂಗ್ ನ ಸದಸ್ಯರನ್ನು ಹತೋಟಿಗೆ ತರಲು ಚಿಂತನೆ ಮಾಡಲಾಗುತ್ತಿದೆ. ಬೇರೆ ಬ್ಯಾರಕ್ ಅಥವಾ ಜೈಲಿಗೆ ಶಿಫ್ಟ್ ಮಾಡಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಈ ಬಗ್ಗೆ ಕಾರಾಗೃಹ ಡಿಜಿ ಜೊತೆ ಚರ್ಚೆ ನಡೆಸಲಿರುವ ಕಮಲ್ ಪಂತ್ ಮುಂದಿನ ದಿನಗಳಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುಳಿತವರ ನೆಟ್ವರ್ಕ್ ಬ್ಲಾಕ್ ಮಾಡಲು ತಂತ್ರ ರೂಪಿಸಲಿದ್ದಾರೆ ಎಂದು ತಿಳಿದುಬಂದಿದೆ.