ವಾಹನ ಸವಾರರಿಗೆ ರಿಲ್ಯಾಕ್ಸಿಂಗ್ ನ್ಯೂಸ್ | ಪೆಟ್ರೋಲ್ ಡೀಸೆಲ್ ಬೆಲೆಗಳಲ್ಲಿ ಇಳಿಕೆಯ ಹಾದಿ ಶುರು !!
ಕೇಂದ್ರ ಸರ್ಕಾರ ಎಕ್ಸೆಸ್ ಸುಂಕ ಕಡಿತಗೊಳಿಸದಿದ್ದರೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಡಿಮೆಯಾಗುವ ಸಾಧ್ಯತೆ ದಟ್ಟವಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಉತ್ಪಾದನೆ ಮತ್ತು ಕಡಿಮೆ ಬೇಡಿಕೆಯಿಂದಾಗಿ ಕಚ್ಚಾ ತೈಲ ಬೆಲೆ ತನ್ನಷ್ಟಕ್ಕೆ ತಾನೇ ಕಡಿಮೆ ಆಗಲಿದೆ ಎಂದು ತಜ್ಞರು ಹೇಳಿದ್ದಾರೆ.
ಬುಧವಾರ ತೈಲ ಬೆಲೆಯಲ್ಲಿ ಕೊಂಚ ಇಳಿಕೆಯಾಗಿತ್ತು. ಮಂಗಳವಾರ ಶೇ. 1ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಬ್ರೆಂಟ್ ಕಚ್ಚಾ ತೈಲ ಬುಧವಾರ ಶೇ 0.8 ರಷ್ಟು ಕುಸಿದು ಬ್ಯಾರೆಲ್ಗೆ ಸುಮಾರು 69 ಡಾಲರ್ಗೆ ತಲುಪಿದೆ. ಕಚ್ಚಾ ತೈಲ ಬೆಲೆಯು ಸೋಮವಾರ ತೀವ್ರ ಕುಸಿತ ಕಂಡಿತ್ತು. ತಿಂಗಳ ಆರಂಭದಲ್ಲಿ ಬ್ಯಾರೆಲ್ಗೆ 76 ಡಾಲರ್ ಬೆಲೆಯಲ್ಲಿ ವಹಿವಾಟು ನಡೆಸುತ್ತಿದ್ದ ಕಚ್ಚಾ ತೈಲ ದರ ಸೋಮವಾರ ಬ್ಯಾರೆಲ್ಗೆ 67 ಡಾಲರ್ಗೆ ಇಳಿದಿತ್ತು.
‘ಉತ್ಪಾದನೆಯನ್ನು ಹೆಚ್ಚಿಸಲು ಒಪೆಕ್ + ಮಿತ್ರ ದೇಶಗಳು ಒಪ್ಪಿದ ನಂತರ ಮಾರುಕಟ್ಟೆಗೆ ಹೆಚ್ಚಿನ ಪೂರೈಕೆ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗುತ್ತಿದೆ. ಕೊರೊನಾ ವೈರಸ್ನ ವೇಗವಾಗಿ ಹರಡುತ್ತಿರುವ ಡೆಲ್ಟಾ ರೂಪಾಂತರ ಮತ್ತು ಪ್ರಪಂಚದಾದ್ಯಂತದ ಹಲವಾರು ದೇಶಗಳಲ್ಲಿನ ಹೊಸ ನಿರ್ಬಂಧಗಳಿಂದಾಗಿ ಇಂಧನ ಬೇಡಿಕೆಯ ದೃಷ್ಟಿಕೋನದ ಬಗ್ಗೆ ಹೆಚ್ಚುತ್ತಿರುವ ಕಳವಳದಿಂದಾಗಿ ಕಚ್ಚಾ ತೈಲ ಬೆಲೆ ಕುಸಿಯುತ್ತಿದೆ.’ ಎಂದು ಕೆಡಿಯಾ ಕಮಾಡಿಟೀಸ್ನ ಅಜಯ್ ಕುಮಾರ್ ಕೆಡಿಯಾ ಹೇಳಿದರು.
ಒಪೆಕ್ ಮತ್ತು ಅದರ ಮಿತ್ರ ರಾಷ್ಟ್ರಗಳು ಜಾಗತಿಕ ತೈಲ ಉತ್ಪಾದನೆಯನ್ನು ದಿನಕ್ಕೆ 4,00,000 ಬ್ಯಾರೆಲ್ಗೆ ಹೆಚ್ಚಿಸಲು ಒಪ್ಪಿಕೊಂಡಿವೆ. ಕೋವಿಡ್ -19 ಆರಂಭದಲ್ಲಿ ಉತ್ಪಾದನೆಯನ್ನು ಮಾಡಿದ್ದ ಎಲ್ಲ ಕಡಿತವನ್ನು ಪುನಃಸ್ಥಾಪಿಸಲು ಆ ದೇಶಗಳು ಬದ್ಧವಾಗಿವೆ.
ಹೊಸ ಕೋವಿಡ್ ಪ್ರಕರಣಗಳಿಂದಾಗಿ ಉತ್ಪಾದನೆ ಮತ್ತು ಕಡಿಮೆ ಬೇಡಿಕೆಯಿಂದಾಗಿ ಕಚ್ಚಾ ತೈಲದ ಬೆಲೆ ತನ್ನಷ್ಟಕ್ಕೆ ತಾನೆ ಕಡಿಮೆ ಆಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.