ಕೈಯೊರೆಸಲು ಇಟ್ಟುಕೊಂಡಿದ್ದ ಟವೆಲ್ ಬಾಣಂತಿಯ ಹೊಟ್ಟೆಯೊಳಗೇ ಬಾಕಿ | ಸಿಜೇರಿಯನ್ ನಡೆದಾಗ ಆದ ಯಡವಟ್ಟು !?

ಸಿಜರಿಯನ್ ಡೆಲವರಿ ಮಾಡುವ ಸಂದರ್ಭದಲ್ಲಿ ವೈದ್ಯರು ಮಹಿಳೆಯ ಹೊಟ್ಟೆಯಲ್ಲಿಯೇ ಟವಲ್ ಬಿಟ್ಟು ಶಸ್ತ್ರಚಿಕಿತ್ಸೆ ನಡೆಸಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಹಜಾರಾನಪುರದಲ್ಲಿ ನಡೆದಿದೆ.

 

ಕಳೆದ ಜನವರಿಯಲ್ಲಿ ಈ ಘಟನೆ ನಡೆದಿದೆ. ಆದರೆ ದಿನದಿಂದ ದಿನಕ್ಕೆ ಮಹಿಳೆಗೆ ಹೊಟ್ಟೆ ನೋವು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿಸಿದಾಗ ಈ ವಿಷಯ ಬಹಿರಂಗಗೊಂಡಿದೆ. ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರು ಈ ಎಡವಟ್ಟು ಮಾಡಿದ್ದು, ಇದೀಗ ಮಹಿಳೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

30 ವರ್ಷದ ನೀಲಂ ಅವರು ವೈದ್ಯರ ನಿರ್ಲಕ್ಷ್ಯಕ್ಕೆ ಒಳಗಾಗಿರುವ ದುರ್ದೈವಿ. ಸದ್ಯ ಆಕೆಯ ಹೊಟ್ಟೆಯಿಂದ ಬಟ್ಟೆಯನ್ನು ತೆಗೆಯಲಾಗಿದೆ. ಆದರೆ ಆಕೆಯ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ನಗರದ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನ ಆಘಾತ ಕೇಂದ್ರದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಮೂವರು ಸದಸ್ಯರ ವಿಚಾರಣಾ ತಂಡವನ್ನು ರಚಿಸಿದ್ದು, ವರದಿಯನ್ನು ಆದಷ್ಟು ಬೇಗ ನೀಡುವಂತೆ ಸೂಚಿಸಿದ್ದಾರೆ.

ತಿಲ್ದಾರ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಾಪುರ ಉತ್ತರ ನಿವಾಸಿ, ನೀಲಂ ಅವರ ಪತಿ ಮನೋಜ್ ಅವರು ದೂರು ನೀಡಿದ್ದಾರೆ. ಜನವರಿ 6 ರಂದು ನೀಲಂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು, ಈ ಸಂದರ್ಭದಲ್ಲಿ ಬಟ್ಟೆಯನ್ನು ಹೊಟ್ಟೆಯಲ್ಲಿಯೇ ಉಳಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದೂರು ಸ್ವೀಕರಿಸಿದ ತಕ್ಷಣ, ತನಿಖಾ ಸಮಿತಿಯನ್ನು ರಚಿಸಿಲಾಗಿದೆ. ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲರು ಹೇಳಿದ್ದಾರೆ.

Leave A Reply

Your email address will not be published.