60 ವರ್ಷದ ವೃದ್ದೆಯನ್ನು ಸಾಕ್ಷಿಗಾಗಿ ಸಹಿ ಹಾಕಲು ನಂಬಿಸಿ ಕರೆದುಕೊಂಡು ಹೋಗಿ ತಲೆಯ ಮೇಲೆ ಸಾಲ ಹೊರಿಸಿ ಕಳಿಸಿದ ಖತರ್ನಾಕ್ !
ಅವಿದ್ಯಾವಂತೆ ವೃದ್ದೆಗೆ ಮೊಬೈಲ್ ಖರೀದಿಸಲು ಸಾಕ್ಷಿಗೆ ಸಹಿ ಹಾಕಲು ಬನ್ನಿ ಎಂದು ನಂಬಿಸಿ ದಾಖಲೆಗಳನ್ನು ಪಡೆದು ವೃದ್ಧೆಯ ಹೆಸರಲ್ಲೇ EMI ಯಲ್ಲಿ ಪೋನ್ ಖರೀದಿಸಿ, ಯುವಕನೊಬ್ಬ ಪರಾರಿಯಾದ ಘಟನೆ ಸುಳ್ಯದಲ್ಲಿ ನಡೆದಿದೆ.
ಸುಳ್ಯ ಗಾಂಧಿನಗರ ನಾವೂರಿನ 60 ವರ್ಷದ ವೃದ್ದ ಮಹಿಳೆ ಕದೀಜ ಎಂಬುವವರು ಮೊಬೈಲ್ ಖರೀದಿಸಲು ಸಾಕ್ಷಿ ಹಾಕಲೆಂದು ಕರೆದುಕೊಂಡು ಹೋದ ಪಕ್ಕದ ಮನೆಯ ಹಾರಿಸ್ ಎಂಬ ಯುವಕನನ್ನು ನಂಬಿ ವಂಚನೆಗೆ ಒಳಗಾಗಿದ್ದಾರೆ.
ಹಾರಿಸ್ ಎಂಬಾತನು ಹೊಸ ಮೊಬೈಲ್ ಖರೀದಿಸಲು ತಮ್ಮ ಸಾಕ್ಷಿ ಬೇಕಾಗಿದೆ ಎಂದು ವೃದ್ಧ ಮಹಿಳೆಯನ್ನು ನಂಬಿಸಿ, ಸುಳ್ಯ ಪೊಲೀಸ್ ಠಾಣೆ ಬಳಿ ಇರುವ ಮೊಬೈಲ್ ಅಂಗಡಿಗೆ ಕರೆದೊಯ್ದು ಅವರ ಹೆಸರಿನಲ್ಲಿಯೇ 16 ಸಾವಿರ ರೂಪಾಯಿ ಬೆಲೆ ಬಾಳುವ ಮೊಬೈಲ್ ಫೋನನ್ನು ಫೈನಾನ್ಸ್ ಸಂಸ್ಥೆಯ ಮೂಲಕ ಖರೀದಿಸಿ ವಂಚನೆ ನಡೆಸಿದ್ದು,ಸಾಕ್ಷಿ ನೆಪದಲ್ಲಿ ವೃದ್ದೆಯ ಆಧಾರ್ ಕಾರ್ಡ್, ಹಾಗೂ ಬ್ಯಾಂಕ್ ಪಾಸ್ ಬುಕ್ಕಿನ ದಾಖಲೆಪತ್ರಗಳನ್ನು ಪಡೆದುಕೊಂಡಿದ್ದಾನೆ.
ಮೊಬೈಲ್ ಫೋನ್ ಅಂಗಡಿಯವರಿಗೆ ತಾಯಿ ಎಂದು ಹೇಳಿದ್ದಾರೆ. ಅವಿದ್ಯಾವಂತೆ ಆಗಿರುವ ಮಹಿಳೆ ಈತನ ಮಾತನ್ನು ನಂಬಿ ಕೇಳಿದ ದಾಖಲೆಗಳನ್ನು ನೀಡಿದ್ದಾರೆ. ನಂತರ ಮನೆಗೆ ತೆರಳಿ ಕದೀಜ ರವರನ್ನು ಅಂಗಡಿಗೆ ಕರೆತಂದು ಅವರ ಭಾವಚಿತ್ರವನ್ನು ಮೊಬೈಲ್ ನಲ್ಲಿ ತೆಗೆದು ತನಗೆ ಬೇಕಾದ ಓಟಿಪಿ ನಂಬರ್ ಮುಂತಾದವುಗಳನ್ನು ತನ್ನದೇ ಬಳಿಯಿದ್ದ ಮತ್ತೊಂದು ಮೊಬೈಲ್ ಮೂಲಕ ನೀಡಿ ತನ್ನ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಿಸಿಕೊಂಡಿದ್ದಾನೆ.
ಇದೀಗ ಒಂದು ವರ್ಷ ಕಳೆದ ನಂತರ ಖದೀಜ ಎಂಬವರ ಮೊಬೈಲಿಗೆ ಬ್ಯಾಂಕಿನಿಂದ ತಮ್ಮ ಖಾತೆಗೆ 18,346 ರೂ ಪಾವತಿಸಲು ಬಾಕಿ ಇದೆ ಎಂಬ ಮೆಸೇಜು ಬರಲು ಆರಂಭಿಸಿದೆ.ಇದರಿಂದ ಆತಂಕಗೊಂಡ ಖದೀಜರವರು ತನ್ನ ಹಿರಿಯ ಮಗಳನ್ನು ಬ್ಯಾಂಕಿಗೆ ಕಳುಹಿಸಿ ವಿಚಾರಿಸಿದಾಗ ತಾನು ಮೋಸ ಹೋಗಿರುವುದು ತಿಳಿದುಬಂದಿದೆ. ಇದರ ನಡುವೆ ತಮ್ಮ ಮನೆಯ ಗ್ಯಾಸ್ ಸಬ್ಸಿಡಿ ಬಂದ ಹಣವು ಇದರಿಂದ ಕಡಿತಗೊಳಿಸಲಾಗಿತ್ತು.
ಇದೀಗ ಮೊಬೈಲ್ ಖರೀದಿಸಿ ವಂಚಿಸಿರುವ ಯುವಕನ ಮನೆಯವರು ಕಳೆದ ಒಂದು ವರ್ಷದ ಹಿಂದೆ ನಾವೂರಿನ ಮನೆಯನ್ನು ಮಾರಾಟ ಮಾಡಿ ಬೇರೆಡೆಗೆ ಹೋಗಿದ್ದಾರೆನ್ನಲಾಗಿದೆ. ಈ ಎಲ್ಲಾ ಘಟನೆಯಿಂದ ಹಾರಿಸ್ ನ ತಾಯಿಯವರಿಗೆ ದೂರವಾಣಿ ಮೂಲಕ ವಿಚಾರಿಸಿದಾಗ ಅವನಿರುವ ಸ್ಥಳವನ್ನು ಖಚಿತವಾಗಿ ನೀಡಿಲ್ಲ ಎಂದು ತಿಳಿದುಬಂದಿದೆ.
ಇದೀಗ ತಾನು ಖರೀದಿಸದ ವಸ್ತುವಿಗಾಗಿ ವೃದ್ಧ ಮಹಿಳೆ ಫೈನಾನ್ಸ್ ಕಂಪನಿ, ಬ್ಯಾಂಕ್, ಮೊಬೈಲ್ ಅಂಗಡಿಗಳಿಗೆ ಪರಿಹಾರವನ್ನು ಹುಡುಕಿ ನಡೆದಾಡಲು ಪ್ರಾರಂಭಿಸಿದ್ದಾರೆ.