ತುಳು ಲಿಪಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅಧಿಕೃತ ಮಾನ್ಯತೆ
ಮಂಗಳೂರು: ತುಳು ಭಾಷೆಯನ್ನು 8ನೇ ಪರಿಚ್ಛೇದನಕ್ಕೆ ಸೇರಿಸಬೇಕು, ತುಳು ಲಿಪಿಗೆ ಯುನಿಕೋಡ್ ಒಕ್ಕೂಟದ ಮಾನ್ಯತೆ ಸಿಗಬೇಕೆಂಬ ಬೇಡಿಕೆ ಇಂದು ನಿನ್ನೆಯದಲ್ಲ. ಇದೀಗ ತುಳು ಸಾಹಿತಿಗಳು, ಹೋರಾಟಗಾರರು ಸೇರಿದಂತೆ ಪ್ರತಿಯೊಬ್ಬರ ಅಭಿಲಾಷೆಗೆ ಗ್ರೀನ್ ಸಿಗ್ನಲ್ ದೊರೆತಿದೆ .
ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ರೂಪಿಸಿದ ತುಳು ಲಿಪಿಯನ್ನು ಸೂಕ್ತವಾಗಿ ಯುನಿಕೋಡ್ ನಕಾಶೆ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳುವುದಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅನುಮೋದಿಸಿದ್ದಾರೆ.
ಈ ಕುರಿತು ಸೋಮವಾರ ಇಲಾಖೆಯು ತುಳು ಅಕಾಡೆಮಿಗೆ ಪತ್ರ ಬರೆದಿದೆ. ಈ ಬಗ್ಗೆ ಭಾರತೀಯ ಭಾಷಾ ಸಂಸ್ಥಾನವೂ ತಜ್ಞ ಸಮಿತಿಯನ್ನು ರಚಿಸಿ ಯುನಿಕೋಡ್ಗೆ ಸೇರಿಸುವ ಬಗ್ಗೆ ಶಿಫಾರಸು ಮಾಡಿರುವುದು ಗಮನಾರ್ಹ. ಇದರಿಂದ ತುಳು ಲಿಪಿಯು ಯುನಿಕೋಡ್ನಲ್ಲಿ ಮೂಡುವ ಪ್ರಕ್ರಿಯೆ ಸುಗಮವಾಗಿದೆ ಎಂದು ಮುಖ್ಯಮ ಕಚೇರಿ ಅಧಿಕಾರಿ ಬೇಳೂರು ಸುದರ್ಶನ ತಮ್ಮ ಫೇಸ್ಟುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈ ಪ್ರಕ್ರಿಯೆ ಪೂರ್ಣಗೊಳ್ಳಲು ಬೆಂಬಲವಾಗಿ ನಿಂತ ಮುಖ್ಯಮಂತ್ರಿಯವರಿಗೆ, ಸಚಿವರಿಗೆ, ಸಚಿವಾಲಯದ ಅಧಿಕಾರಿಗಳಿಗೆ ಮತ್ತು ಅಕಾಡೆಮಿಗೆ ನನ್ನ ವಂದನೆಗಳು. ತುಳು ಲಿಪಿಯನ್ನು ಯುನಿಕೋಡ್ ನಕಾಶೆಗೆ ತಕ್ಕಂತೆ ರೂಪಿಸುವಲ್ಲಿ ಶ್ರಮವಹಿಸಿದ ಎಲ್ಲ ತಜ್ಞರಿಗೂ ಅಭಿನಂದನೆಗಳು ಎಂದು ಬೇಳೂರು ಸುದರ್ಶನ ಉಲ್ಲೇಖಿಸಿದ್ದಾರೆ.
ಭವ್ಯ ಪರಂಪರೆ, ಇತಿಹಾಸ ಹೊಂದಿದ, ಕನ್ನಡ ನಾಡಿನಲ್ಲಿ ಸುದೀರ್ಘ ಮತ್ತು ಸುಶಾಸನದ ಆಡಳಿತ ನೀಡಿದ ತುಳು ಸಂಸ್ಕೃತಿಯು ಯುನಿಕೋಡ್ ಲಿಪಿಯ ಮೂಲಕ ಇನ್ನಷ್ಟು ಜನಪ್ರಿಯವಾಗಲಿ. ಡಿಜಿಟಲ್ ವೇದಿಕೆಗಳಲ್ಲಿ ತುಳು ಲಿಪಿ ಹೆಚ್ಚು ಹೆಚ್ಚು ಕಾಣಲಿ ಎಂದು ಮನದಾಳದಿಂದ ಹಾರೈಸಿದ್ದಾರೆ.