ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ವಿದ್ಯಾರ್ಥಿ ಗೈರು; ಶಾಲಾ ಮುಖ್ಯಗುರುವಿಗೆ ನೋಟೀಸ್ | ಕಡಬ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವ ಅಂಗಾರ ಸೂಚನೆ
ಕಡಬ: ಕಡಬ ತಾಲೂಕಿನ ಕಡಬ ಸರ್ಕಾರಿ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಸೋಮವಾರ ನಡೆದ ಪರೀಕ್ಷೆಗೆ ಗೈರಾಗಲು ಶಾಲಾ ಮುಖ್ಯಗುರುವಿನ ಬೇಜವಾಬ್ದಾರಿಯೇ ಕಾರಣ ಹೀಗಾಗಿ ಶಾಲಾ ಮುಖ್ಯಗುರುವಿಗೆ ನೋಟೀಸು ನೀಡಿ ಕ್ರಮಕೈಗೊಳ್ಳಿ ಎಂದು ಸಚಿವ ಎಸ್ ಅಂಗಾರ ಕಡಬ ತಾಲೂಕು ಪಂಚಾಯಿತಿ ತೈಮಾಸಿಕ ಕೆಡಿಪಿ ಸಭೆಯಲ್ಲಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ಅವರಿಗೆ ಸೂಚಿಸಿದರು.
ಅವರು ಮಂಗಳವಾರ ಕಡಬ ಅಂಬೇಡ್ಕರ್ ಭವನದಲ್ಲಿ ನಡೆದ ಕಡಬ ತಾ.ಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಶಿಕ್ಷಣ ಇಲಾಖಾ ಮಾಹಿತಿ ನೀಡಿದ ಲೋಕೇಶ್ , ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಕಡಬ ತಾಲೂಕಿನಲ್ಲಿ ಓರ್ವ ವಿದ್ಯಾರ್ಥಿ ಪರೀಕ್ಷೆಗೆ ಗೈರಾಗಿರುವ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಗರಂ ಆದ ಸಚಿವರು ಇಷ್ಟೊಂದು ವ್ಯವಸ್ಥಿತವಾಗಿ ಪರೀಕ್ಷೆ ನಡೆಸುತ್ತಿದ್ದರೂ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡದೆ ವಿದ್ಯಾರ್ಥಿಯೊಬ್ಬ ಗೈರಾಗಿದ್ದು ಹೇಗೆ ಮತ್ತು ಯಾವ ಶಾಲೆಯ ವಿದ್ಯಾರ್ಥಿ ಆತ ಎಂದು ತರಾಟೆಗೆ ತೆಗದುಕೊಂಡರು. ಉತ್ತರಿಸಿದ ಶಿಕ್ಷಣಾಧಿಕಾರಿಯವರು ಅದು ಕಡಬ ಸರಕಾರಿ ಹೈಸ್ಕೂಲು ವಿದ್ಯಾರ್ಥಿ ಎಂದರು. ಆ ಶಾಲೆಯ ಮುಖ್ಯಸ್ಥರಿಗೆ ತಕ್ಷಣ ನೋಟೀಸ್ ನೀಡಿ ಕ್ರಮಕೈಗೊಳ್ಳಿ ಬಳಿಕ ವರದಿ ಕೊಡಿ ಎಂದು ಸಚಿವರು ಆದೇಶಿಸಿದರು.
ಇಚ್ಲಂಪಾಡಿ: ಮಂಜುರಾದ ರಸ್ತೆ ಬದಲು ಇನ್ನೊಂದು ರಸ್ತೆ ಅಭಿವೃದ್ಧಿ: ಗೊಂದಲಕ್ಕೆ ತೆರೆ:
ಕೋಡಿಂಬಾಳ- ನೂಜಿಬಾಳ್ತಿಲ-ಇಚ್ಲಂಪಾಡಿ -ಬಲ್ಯ ದೇರಾಜೆ ರಸ್ತೆಯನ್ನು ಮೇಲ್ದರ್ಜೆಗರಿಸಿ ಅಭಿವೃದ್ಧಿಪಡಿಸಲು ಸರ್ಕಾರ ನಿರ್ಧರಿಸಿದ್ದು, ಈ ರಸ್ತೆಯಲ್ಲಿ ಬರುವ ಇಚ್ಲಾಂಪಾಡಿಯಿಂದ ಬಲ್ಯ ದೇರಾಜೆಗೆ ಬರುವ ರಸ್ತೆಯನ್ನು ಉದ್ದೇಶಿದ ರಸ್ತೆ ಬದಲಾಗಿ ಬೇರೆ ರಸ್ತೆ ಸರ್ವೆ ಮಾಡಲಾಗಿದೆ ಎಂದು ಕೆಲವರು ಗೊಂದಲ ಸೃಷ್ಠಿ ಮಾಡಿದ್ದಾರೆ, ಮಂಜೂರಾದ ರಸ್ತೆಯಲ್ಲೇ ಸರ್ವೆ ನಡೆಯುತ್ತಿದೆ.
ಉದ್ದೇಶಿತ ಇಚ್ಲಂಪಾಡಿ-ಪಳಿಕೆ-ಮೂಡೆಜಾಲ್-ಬೀಡುಬೈಲ್-ದೇರಾಜೆ ಮುಖ್ಯ ರಸ್ತೆಯೇ ಮೇಲ್ದರ್ಜೆಗೆ ಏರಿಸಿಲಾಗಿದೆ, ಇಚ್ಲಂಪಾಡಿ-ಕೈಪನಡ್ಕ-ಕೆಡೆಂಬೇಲ್ ರಸ್ತೆ ಅಲ್ಲ ಎಂದು ಭಾಸ್ಕರ ಗೌಡ ಇಚ್ಲಂಪಾಡಿ ಸ್ಪಷ್ಟಿಕರಣ ನೀಡಿದರು. ಈ ವೇಳೆ ಸಚಿವರು ಮಾತನಾಡಿ, ಉದ್ದೇಶಿತ ರಸ್ತೆಯನ್ನು ಅಭಿವೃದ್ದಿಪಡಿಸಿ ಯಾವೂದೆ ಗೊಂದಲ ಮಾಡಿಕೊಳ್ಳಬೇಡಿ ಎಂದು ಲೋಕೊಪಯೋಗಿ ಇಲಾಖಾ ಇಂಜಿನಿಯರ್ ಪ್ರಮೋದ್ ವರಿಗೆ ಸೂಚಿಸಿದರು.
ದ.ಕ ದಲ್ಲಿ ಒಳನಾಡು ಮೀನುಗಾರಿಕೆಗೆ ಆದ್ಯತೆ:
ದ.ಕ ಜಿಲ್ಲೆಯಲ್ಲಿ ಸಾಕಷ್ಟು ಕೆರೆಗಳಿವೆ, ಮೇ ತಿಂಗಳ ತನಕ ನೀರಿರುವ ಕೆರೆಗಳಿವೆ. ಅದರಲ್ಲಿ ಒಳನಾಡು ಮೀನುಗಾರಿಕೆ ಮಾಡಲು ಸರ್ಕಾರ ಪ್ರೋತ್ಸಾಹ ನೀಡಲಿದೆ. ಈ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಮುಂದಿನ ತಿಂಗಳು ರೈತರಿಗೆ ಸುಳ್ಯದಲ್ಲಿ ತರಬೇತಿಯನ್ನು ಅಯೋಜಿಸಲಾಗಿದೆ. ಬಳಿಕ ಕಡಬದಲ್ಲೂ ತರಬೇತಿ ನೀಡಿ ರೈತರಿಗೆ ಮೀನು ಕೃಷಿಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಸಚಿವರು ಈ ಸಂದರ್ಭದಲ್ಲಿ ಸಭೆಗೆ ತಿಳಿಸಿದರು.
ಡಿವೈಎಸ್‍ಪಿ ಡಾ|ಗಾನಾ ಪಿ ಕುಮಾರ್, ಕಡಬ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಸೀತಾ, ಕಡಬ ತಹಶಿಲ್ದಾರ್ ಅನಂತಶಂಕರ್ ಉಪಸ್ಥಿತರಿದ್ದರು. ಪುತ್ತೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಢಾರಿ ಸ್ವಾಗತಿಸಿ, ವಂದಿಸಿದರು.