ಕ್ಯಾಡ್ಬೆರಿ ಚಾಕಲೇಟ್ ನಲ್ಲಿ ದನದ ಮಾಂಸ ಉಂಟೆಂದು ಎದ್ದ ವಿವಾದ | ಸಂಸ್ಥೆಯ ಉತ್ತರ ಕೇಳಿ ಚಾಕಲೇಟ್ ಗಂಟಲಲ್ಲೇ ಲಾಕ್ !!
ಕ್ಯಾಡ್ಬೆರಿ ಚಾಕಲೇಟ್ ನಲ್ಲಿ ದನದ ಮಾಂಸ ಉಂಟಾ ಎಂದು ಎದ್ದ ವಿವಾದಕ್ಕೆ ಇದೀಗ ಉತ್ತರಿಸಿದ ಚಾಕಲೇಟ್ ತಯಾರಿಕಾ ಸಂಸ್ಥೆ. ಸಂಸ್ಥೆಯ ಉತ್ತರ ಕೇಳಿದ ಚಾಕಲೇಟ್ ಪ್ರಿಯರಿಗೆ ಚಾಕಲೇಟ್ ಗಂಟಲಲ್ಲಿ ಸಿಕ್ಕಿಕೊಂಡ ಅನುಭವ.
ಹೌದು, ಕ್ಯಾಡ್ಬೆರಿ ಚಾಕಲೇಟ್ ನಲ್ಲಿ ದನದ ಮಾಂಸ ಬಳಸುತ್ತಿರುವುದಾಗಿ ಕಂಪನಿ ಒಪ್ಪಿಕೊಂಡಿದೆ. ಆದರೆ, ಭಾರತದಲ್ಲಿ ಶುದ್ಧ ಸಸ್ಯಾಹಾರಿ ಚಾಕಲೇಟ್ ಗಳನ್ನಷ್ಟೇ ಮಾರಾಟ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.
ಭಾರತದಲ್ಲಿನ ಉತ್ಪನ್ನಗಳು 100% ಸಸ್ಯಾಹಾರಿಗಳಾಗಿವೆ ಎಂದು ಸಮರ್ಥನೆ ನೀಡಿದ್ದು, ಕಳೆದೊಂದು ವಾರದಿಂದ ಸಾಮಾಜಿಕ ಜಾಲತಾಣ ಸೇರಿ ವಿವಿಧ ಮಾಧ್ಯಮಗಳಲ್ಲಿ ನಡೆಯುತ್ತಿದ್ದ ಭಾರೀ ಚರ್ಚೆಗೆ ತೆರೆ ಎಳೆದಿದೆ.
ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಕ್ಯಾಡ್ಬೆರಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ನೆಟ್ಟಿಗರು ಕರೆ ನೀಡಿದ ನಂತರ, ಮಾಂಡೆಲೆಜ್ ಇಂಟರ್‌ನ್ಯಾಷನಲ್‌ನ ಒಡೆತನದ ಬ್ರಿಟಿಷ್ ಬಹುರಾಷ್ಟ್ರೀಯ ಕಂಪನಿಯ ಸ್ಪಷ್ಟೀಕರಣ ನೀಡಿದೆ.
ಕೆಲವು ಟ್ವಿಟರ್ ಬಳಕೆದಾರರು ಕ್ಯಾಡ್ಬೆರಿಯ ವೆಬ್‌ಸೈಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದರು. ಅದರಲ್ಲಿ “ದಯವಿಟ್ಟು ಗಮನಿಸಿ, ನಮ್ಮ ಯಾವುದೇ ಉತ್ಪನ್ನಗಳಲ್ಲಿ ಜೆಲಾಟಿನ್ ಪದಾರ್ಥಗಳಿದ್ದರೆ, ನಾವು ಬಳಸುವ ಜೆಲಾಟಿನ್ ಹಲಾಲ್ ಪ್ರಮಾಣೀಕರಿಸಲ್ಪಟ್ಟಿದೆ ಮತ್ತು ಗೋಮಾಂಸದಿಂದ ಪಡೆಯಲಾಗಿದೆ” ಎಂದು ಬರೆಯಲಾಗಿತ್ತು.
ಇದರ ಪರಿಣಾಮವಾಗಿ, ಒಂದು ಉತ್ಪನ್ನವು ಜೆಲಾಟಿನ್ ಅನ್ನು ಒಂದು ಘಟಕಾಂಶವಾಗಿ ಹೊಂದಿದ್ದರೆ, ಅದು ಗೋಮಾಂಸದಿಂದ ಹುಟ್ಟಿಕೊಂಡಿದೆ ಎಂದು ನೆಟ್ಟಿಗರು ಪ್ರತಿಪಾದಿಸಿದ್ದರು.
ಪರಿಣಾಮವಾಗಿ, ಕ್ಯಾಡ್ಬೆರಿ ಡೈರಿ ಮಿಲ್ಕ್ ಟ್ವಿಟ್ಟರ್ ಖಾತೆಯು ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡಿ ಟ್ವೀಟ್ ಮಾಡಿದೆ. “ಹಾಯ್, ಟ್ವೀಟ್‌ನಲ್ಲಿ ಹಂಚಲಾದ ಸ್ಕ್ರೀನ್‌ಶಾಟ್ ಗಳು ಭಾರತದಲ್ಲಿ ತಯಾರಾದ ಮಾಂಡೆಲೆಜ್ ಉತ್ಪನ್ನಗಳಿಗೆ ಸಂಬಂಧಿಸಿಲ್ಲ. ಭಾರತದಲ್ಲಿ ತಯಾರಿಸಿದ ಮತ್ತು ಮಾರಾಟ ಮಾಡುವ ಎಲ್ಲಾ ಉತ್ಪನ್ನಗಳು 100% ಸಸ್ಯಾಹಾರಿಗಳಾಗಿವೆ. ರಾಪರ್ ಮೇಲಿನ ಹಸಿರು ಚುಕ್ಕೆ ಅದನ್ನು ಸೂಚಿಸುತ್ತದೆ” ಎಂದು ಚಾಕೊಲೇಟ್ ತಯಾರಿಸುವ ಸಂಸ್ಥೆ ಬರೆದಿದೆ.