ಸ್ಯಾಂಡಲ್ ವುಡ್ ‘ ಡಿ ಬಾಸ್ ‘ ಫಿಲ್ಮ್ ಸ್ಟೈಲ್ ನಲ್ಲಿ ಹೋಟೆಲ್ ನೌಕರನ ಮೇಲೆ ಹಲ್ಲೆ ನಡೆಸಿದ್ದರಾ ? | ತನಿಖೆಗೆ ಆದೇಶ ನೀಡಿದ ಗೃಹ ಮಂತ್ರಿ !
ಬೆಂಗಳೂರು: ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ವಂಚನೆ ಪ್ರಕರಣ ಕೇಸು ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಮೈಸೂರಿನಲ್ಲಿ ಸಂದೇಶ್ ನಾಗರಾಜ್ ಹೊಟೇಲ್ ನಲ್ಲಿ ನಟ ದರ್ಶನ್ ಮತ್ತು ಅವರ ಸ್ನೇಹಿತರು ದಲಿತ ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತನಿಖೆಗೆ ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಮೈಸೂರು ಪೊಲೀಸರಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರು ಆದೇಶ ಹೊರಡಿಸಿದ್ದಾರೆ. ದರ್ಶನ್ ಮತ್ತು ಗ್ಯಾಂಗ್ ದಲಿತ ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇಂದ್ರಜಿತ್ ಬೆಳಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ದೂರು ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಧ್ಯಮದವರು ಪ್ರತಿಕ್ರಿಯೆ ಕೇಳಿದಾಗ ನಿರ್ಮಾಪಕ ಮತ್ತು ಉದ್ಯಮಿ ಸಂದೇಶ್ ನಾಗರಾಜ್, ನನಗೆ ಟಿವಿ ನೋಡಿದ ಮೇಲೆಯೇ ಗೊತ್ತಾಗಿದ್ದು, ಹಲ್ಲೆ ನಡೆದ ಪ್ರಕರಣ ನನ್ನ ಗಮನಕ್ಕೆ ಬಂದೇ ಇಲ್ಲ, ನನಗೆ ಯಾರು ದೂರು ನೀಡಿಲ್ಲ ಎಂದಿದ್ದಾರೆ.
ಇನ್ನೊಂದೆಡೆ ಹೋಟೆಲ್ ಸಪ್ಲೆಯರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಟ ದರ್ಶನ್, ಇಂದ್ರಜಿತ್ ನನ್ನ ಮೇಲೆ ಮಾಡಿರುವ ಆರೋಪ ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, ನಾನು ಹಲ್ಲೆ ನಡೆಸಿದ್ದರೆ ಅದನ್ನು ಸಾಬೀತುಪಡಿಸಲಿ, ಅಂದು ಊಟ ಕೊಡಲು ತಡವಾಗಿದ್ದಕ್ಕೆ ಸಪ್ಲೆಯರ್ ಗೆ ಪ್ರಶ್ನಿಸಿದ್ದೆ ಅಷ್ಟೇ. ಏನೋ ಎಗರಾಡಿರಬಹುದು ಹೊರತು ಹಲ್ಲೆ ನಡೆಸಿಲ್ಲ. ಇಂದ್ರಜಿತ್ ಲಂಕೇಶ್ ಗೆ ದೊಡ್ಡ ದೊಡ್ಡ ಕಾಂಟ್ಯಾಕ್ಟ್ ಇರಬಹುದು, ಅವರು ದೊಡ್ಡ ಇನ್ವೆಸ್ಟಿಗೇಟರ್ ಅಲ್ಲವೇ? ರಫ್ ಆಗಿ ಮಾತನಾಡಿದರೆ ನಾನೂ ಕೂಡ ರಫ್ ಆಗಿ ಮಾತನಾಡುತ್ತೇನೆ. ಇನ್ನು ನನ್ನದು ಸಂದೇಶ್ ಅವರದ್ದು ಸಾವಿರ ಗಲಾಟೆಗಳಿವೆ. ಆ ವಿಚಾರಗಳ ಬಗ್ಗೆ ಇಂದ್ರಜಿತ್ ಏನು ಬೇಕಾದರೂ ಹೇಳಿಕೊಳ್ಳಲಿ, ಈ ಪ್ರಕರಣದಲ್ಲಿ ಇನ್ನೂ ನೀಡಬಹುದು. ಊಹಾಪೋಹಗಳನ್ನು ನಂಬುವ ಅಗತ್ಯವಿಲ್ಲ ಎಂದು ಕಿಡಿಕಾರಿದರು.
ಇನ್ನು 25 ಕೋಟಿ ವಂಚನೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 16ರಂದೇ ಅರುಣಾ ಕುಮಾರಿ ಮನೆಗೆ ಬಂದಿದ್ದರು. ಅವರಿಗೆ ನಿಮ್ಮದೇನೂ ತಪ್ಪಿಲ್ಲ ಎಂದು ಹೇಳಿ ಕಳುಹಿಸಿದ್ದೆ. ಇನ್ನು ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಸಿಲ್ಲ. ಎಫ್ ಐ ಆರ್ ದಾಖಲಾಗಿದೆ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ಪೊಲೀಸರಿಗೂ ಸ್ವಲ್ಪ ಸಮಯ ನೀಡಬೇಕು ಎಂಬ ಕಾರಣಕ್ಕೆ ಸುಮ್ಮನಿದ್ದೇವೆ ಹೊರತು ಯಾವುದೇ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.