ಧರ್ಮಸ್ಥಳ | ದೊಂಡೋಲೆಯಲ್ಲಿ ಹೊಸ ರೂಪದಲ್ಲಿ ತಲೆ ಎತ್ತಿದೆ ದಿ| ಕೆ. ಶಶಿಧರ್ ರಾವ್ ಸ್ಮರಣಾರ್ಥ ವೃತ್ತ ಹಾಗೂ ಹೈ ಮಾಸ್ಟ್ ಲೈಟ್
ಧರ್ಮಸ್ಥಳ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ದಿ| ಕೆ.ಶಶಿಧರ್ ರಾವ್ ಸ್ಮರಣಾರ್ಥ ದೊಂಡೋಲೆಯಲ್ಲಿ ನಿರ್ಮಿಸಲಾದ ದೊಂಡೋಲೆ ವೃತ್ತ ಮತ್ತು ಹೈ ಮಾಸ್ಟ್ ದೀಪದ ಉದ್ಘಾಟನಾ ಕಾರ್ಯಕ್ರಮ ಜು.14 ರಂದು ಜರುಗಿತು.
ವೃತ್ತ ಹಾಗೂ ಹೈ ಮಾಸ್ಟ್ ದೀಪವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಶಶಿಧರ್ ರಾವ್ ಅವರು ಸಾಮಾಜಿಕ ಚಿಂತಕರಾಗಿದ್ದರು, ಸದಾ ಸಮಾಜದ ಬಗ್ಗೆ ಕಾಳಜಿ ಹೊಂದಿದವರಾಗಿದ್ದರು. ಅವರ ನೆನಪಿನಲ್ಲಿ ವೃತ್ತ ನಿರ್ಮಿಸಿರುವುದು ಶ್ಲಾಘನೀಯ ಎಂದರು. ಒಂದು ಪುಟ್ಟ ಊರಿನಲ್ಲಿ ನಗರದ ರೀತಿಯಲ್ಲಿ ವೃತ್ತವನ್ನು ನಿರ್ಮಿಸಲಾಗಿರುವುದು ಇದೇ ಮೊದಲು. ಈ ಕಾರ್ಯ ಮಾಡಿದ ಸದಸ್ಯ ಸುಧಾಕರ್ ಗೌಡ ಹಾಗೂ ಯುವಕರಿಗೆ ಶಾಸಕರು ಅಭಿನಂದನೆ ಸಲ್ಲಿಸಿದರು.
ಉದ್ಘಾಟನಾ ಕಾರ್ಯಕ್ರಮದ ವೇಳೆ ದೊಂಡೋಲೆ ವೃತ್ತ ನಿರ್ಮಾಣದಲ್ಲಿ ಮೇಸ್ತ್ರಿ ಕೆಲಸ ನಿರ್ವಹಿಸಿದ ಜಯಪ್ರಕಾಶ್, ಸುತ್ತಲಿನ ಕಬ್ಬಿಣದ ಬೇಲಿ ನಿರ್ಮಿಸಿದ ವಿಶ್ವನಾಥ್ ಆಚಾರ್ಯ ಮತ್ತು ಪೈಂಟ್ ಮಾಡಿದ ಹರೀಶ್ ರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಈ ಕಾರ್ಯಕ್ರಮದ ರೂವಾರಿ ಸುಧಾಕರ್ ಗೌಡರನ್ನು ಕೂಡ ಊರಿನ ಯುವಕರು ಸನ್ಮಾನಿಸಿ ಗೌರವಿಸಿದರು.
ಕಳೆದ ಕೆಲವು ವರ್ಷಗಳಿಂದ ಧರ್ಮಸ್ಥಳ ಗ್ರಾಮದ ದೊಂಡೋಲೆಯ ಈ ಜಂಕ್ಷನ್ನಲ್ಲಿ ಒಂದು ಸಣ್ಣ ಧ್ವಜ ಸ್ತಂಭ, ಅದರಲ್ಲಿ ಕೇಸರಿ ಧ್ವಜವಿತ್ತು. ಆದರೆ ಇದೀಗ ಅದೇ ಸ್ಥಳದಲ್ಲಿ ಈ ವಾರ್ಡ್ನ ಗ್ರಾಮ ಪಂ. ಸದಸ್ಯ ಹಾಗೂ ಇಲ್ಲಿನ ಯುವಕರ ಶ್ರಮದಿಂದ ಸುಂದರ ಗಾರ್ಡನ್ ಜೊತೆಗೆ ಅತೀ ಎತ್ತರ ಹಾಗೂ ಆಕರ್ಷಕ ಧ್ವಜ ಸ್ತಂಭವನ್ನು ನಿರ್ಮಿಸಲಾಗಿದೆ. ಇಷ್ಟೇ ಅಲ್ಲದೆ ನಗರಗಳ ಸರ್ಕಲ್ಗಳಲ್ಲಿ ಕಂಡು ಬರುವ ಹೈ ಮಾಸ್ಕ್ ಲೈಟ್ ಕೂಡ ಅಳವಡಿಸಲಾಗಿದ್ದು ಇದೀಗ ಕಣ್ಮನ ಸೆಳೆಯುತ್ತಿದೆ.
ಸಣ್ಣ ಮಟ್ಟದ ವೃತ್ತ ಈಗ ಸುಂದರ ವೃತ್ತವಾಗಿ ಬದಲಾಗಲು ಕಾರಣ ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯ ಸುಧಾಕರ ಹಾಗೂ ಯುವಕರು. ಹೌದು, ಸಂಜೆ ಹೊತ್ತು ಕೊಂಚ ಕೊಂಚವೇ ವೃತ್ತದ ಕೆಲಸವನ್ನು ಮಾಡುತ್ತಿದ್ದ ಯುವಕರು ಅದಕ್ಕೊಂದು ರೂಪ ಕೊಟ್ಟರು. ಇವರಿಗೆ ಕೆಲವೊಂದು ದಾನಿಗಳು ಸಾಥ್ ನೀಡಿದರು.
ಈ ಮೂಲಕ ಸುಂದರ ಗಾರ್ಡನ್ ಇರುವ ಹೈ ಮಾಸ್ಕ್ ಲೈಟ್ ಹೊಂದಿರುವ ಧ್ವಜ ಸ್ತಂಭದ ವೃತ್ತವೊಂದು ತಯಾರಾಯ್ತು. ಸದ್ಯ ಶಶಿಧರ್ ರಾವ್ ವೃತ್ತ ದೊಂಡೋಲೆ ಎಂಬ ಊರಿಗೆ ಕಳಶಪ್ರಾಯವಾಗಿದೆ.
ಮಳೆಯ ನಡುವೆಯೆ ನಡೆದ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್, ಶಶಿಧರ್ ರಾವ್ ಸಹೋದರರಾದ ಅನಂತ್ ರಾವ್ ಚಾರ್ಮಾಡಿ, ಪುರಂದರ ರಾವ್ ದೊಂಡೋಲೆ, ಮಕ್ಕಳಾದ ಅಜೇಯ್ ರಾವ್, ರಂಜನಿ ಹೊಳ್ಳ , ಸಂಬಂಧಿ ಸೂರ್ಯನಾರಾಯಣ ರಾವ್ ದೊಂಡೋಲೆ, ಸ್ಥಳೀಯರಾದ ಸತ್ಯಪ್ರಿಯ ಭಟ್, ಶ್ರೀನಿವಾಸ್ ಭಟ್, ದಿನೇಶ್ ರಾವ್, ಯುವಕರಾದ ನಿತಿನ್,ಮನೋಹರ್,ಮಧುಕರ್, ಶಿವ, ನವೀನ್ ಸಪಲ್ಯ, ಡಿ.ಕೃಷ್ಣ ಸೇರಿ ಊರಿನ ಸಮಸ್ತ ನಾಗರಿಕರು ಭಾಗಿಯಾಗಿದ್ದರು.
ದೊಂಡೋಲೆಯ ಪ್ರಮುಖ ಜಂಕ್ಷನ್ನಲ್ಲಿ ಈ ವೃತ್ತವನ್ನು ನಿರ್ಮಿಸಲಾಗಿದ್ದು, ಈ ರಸ್ತೆ ಮೂಲಕ ಬೆಳ್ತಂಗಡಿ ತಾಲೂಕಿನ ಪ್ರಮುಖ ಸ್ಥಳಗಳಾದ ಬೆಳಾಲು, ಉಜಿರೆ, ಉಪ್ಪಿನಂಗಡಿ, ಗುರುವಾಯನಕೆರೆ, ಧರ್ಮಸ್ಥಳಕ್ಕೆ ತಲುಪಬಹುದಾಗಿದೆ.