ನಿಮ್ಮ ಆಧಾರ್ ಹೀಗೆಲ್ಲ ದುರುಪಯೋಗ ಆಗಬಹುದು | ನಿಮ್ಮ ಆಧಾರ್ ಅನ್ನು ಬೇರೆಲ್ಲಿಯಾದರೂ ಬಳಸುತ್ತಿದ್ದಾರಾ ಎಂದು ಹೀಗೆ ಚೆಕ್ ಮಾಡಿಕೊಳ್ಳಿ

ಆಧಾರ್‌ ಕಾರ್ಡ್‌ ದೃಢೀಕರಣದ ಹೆಸರಿನಲ್ಲಿ ವಂಚನೆ ನಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ಈ ಕುರಿತು ಎಚ್ಚರಿಕೆ ವಹಿಸುವಂತೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಮನವಿ ಮಾಡಿದೆ.

ಎರಡು ರೀತಿಯ ವಂಚನೆಗಳನ್ನು ಯುಐಡಿಐಎ ಪತ್ತೆ ಮಾಡಿದೆ. ಮೊದಲನೆಯದು, ದೃಢೀಕರಣದ ನೆಪದಲ್ಲಿ ಯಾರದೋ ಆಧಾರ್‌ ಸಂಖ್ಯೆ ಪಡೆದುಕೊಳ್ಳುವುದು. ಅಪರಿಚಿತರ ಆಧಾರ್‌ ನಂಬರ್‌ ನೀಡುವುದರಿಂದ ಹಣಕಾಸು ವಹಿವಾಟು ನಡೆಸಲು ಹಾಗೂ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಎರಡನೇಯದು, ಯಾವುದಾದರೂ ಗುರುತಿಗೆ ಆಧಾರ್‌ ಕಾರ್ಡ್‌ ನೀಡಬೇಕಿರುವ ಕಡೆ ನಕಲಿ ಸಂಖ್ಯೆಗಳನ್ನು ಒಳಗೊಂಡ ಕಾರ್ಡ್‌ ನೀಡುವುದು. ಹೀಗಾಗಿ ಅಗತ್ಯ ಇರುವ ಕಡೆ ಮಾತ್ರವೇ ಆಧಾರ್‌ ನೀಡಬೇಕು ಹಾಗೂ ಆಧಾರ್‌ ಅನ್ನು ಗುರುತಿನ ಪುರಾವೆಯಾಗಿ ಸ್ವೀಕರಿಸುವವರು ಅದನ್ನು ಅಧಿಕೃತ ವೆಬ್‌ಸೈಟ್‌ ಮೂಲಕ ದೃಢೀಕರಿಸಿಕೊಳ್ಳಬೇಕು ಎಂದು ಪ್ರಾಧಿಕಾರ ಸಲಹೆ ಮಾಡಿದೆ.

ಆಧಾರ್‌ ಅನ್ನು ಆನ್‌ಲೈನ್‌ ಅಥವಾ ಆಫ್‌ಲೈನ್‌ ಮೂಲಕ ಪರಿಶೀಲನೆ ಮಾಡಬಹುದಾಗಿದೆ. ನಿಮ್ಮ ಆಧಾರ್‌ ಸಂಖ್ಯೆಯನ್ನು ಯಾರ್ಯರು ದೃಢೀಕರಿಸಿಕೊಂಡಿದ್ದಾರೆ ಎಂಬುದನ್ನೂ ತಿಳಿದುಕೊಳ್ಳಬಹುದು.

https://resident.uidai.gov.in/verify ಲಿಂಕ್‌ ಬಳಸಿ ಅಂಕಿಗಳ ಪರಿಶೀಲನೆ ನಡೆಸುವ ಮೂಲಕ ಆಧಾರ್‌ಗೆ ಜೋಡಣೆಯಾಗಿರುವ ಬ್ಯಾಂಕ್‌ ಹಾಗೂ ಇತರ ಖಾಸಗಿ ಮಾಹಿತಿಗಳ ದುರುಪಯೋಗವನ್ನು ತಡೆಗಟ್ಟಿರಿ ಎಂದು ಪ್ರಾಧಿಕಾರ ಹೇಳಿದೆ. ಎಂ-ಆಧಾರ್‌ ಆ್ಯಪ್‌ ಮೂಲಕ ಕೂಡ ತಮ್ಮ ಬಳಿಯಿರುವ ಆಧಾರ್‌ ಹೆಸರಿನ ಅಂಕಿಗಳನ್ನು ಪರಿಶೀಲಿಸಬಹುದಾಗಿದೆ.

ಆಫ್‌ಲೈನ್‌ನಲ್ಲಿ ಆಧಾರ್‌ ಸಂಖ್ಯೆ ಪರಿಶೀಲನೆಗಾಗಿ ಕಾರ್ಡ್‌ನಲ್ಲಿರುವ ‘ಕ್ಯುಆರ್‌’ ಕೋಡ್‌ಅನ್ನು ಸ್ಮಾರ್ಟ್‌ಫೋನ್‌ನಲ್ಲಿನ ಸ್ಕ್ಯಾ‌ನರ್‌ ಆ್ಯಪ್‌ ಮೂಲಕ ಸ್ಕ್ಯಾ‌ನ್‌ ಮಾಡಿ ಮಾಹಿತಿ ಪಡೆಯಬಹುದು. ಇವುಗಳ ಜತೆಗೆ 1947ಗೆ (ಟೋಲ್‌ ಫ್ರೀ ಸಂಖ್ಯೆ) ಕರೆ ಮಾಡುವ ಮೂಲಕ ಅಥವಾ help@uidai.gov.in ಗೆ ಇ-ಮೇಲ್‌ ಕಳುಹಿಸುವ ಮೂಲಕ ಕೂಡ ಆಧಾರ್‌ ಪರಿಶೀಲನೆಗೆ ಅವಕಾಶವಿದೆ ಎಂದು ತಿಳಿಸಲಾಗಿದೆ.

Leave A Reply

Your email address will not be published.