ಲೋನ್ ಪಡೆದುಕೊಳ್ಳುವವರಿಗೆ ಗ್ಯಾರಂಟಿ ಹಾಕುವ ಮುನ್ನ ತಿಳಿದುಕೊಳ್ಳಿ ಈ ವಿಷಯಗಳನ್ನು
ಸಾಲ ಪಡೆಯುವವರಿಗೆ ಗ್ಯಾರಂಟಿ ಹಾಕುವ ಮುನ್ನ ಕೆಲವೊಂದು ವಿಷಯಗಳನ್ನು ತಿಳಿದಿರಲೇಬೇಕು.
ಸಾಲಗಾರನು ಸಾಲವನ್ನು (Loan) ಸಮಯಕ್ಕೆ ಸರಿಯಾಗಿ ಮರುಪಾವತಿಸಲು ಸಾಧ್ಯವಾಗದೇ ಹೋದರೆ ಆಗ ಸಾಲಕ್ಕೆ ಖಾತರಿ ಹಾಕಿದ ವ್ಯಕ್ತಿಯು, ಅದನ್ನು ಮರುಪಾವತಿಸಬೇಕಾಗುತ್ತದೆ. ಹೀಗಿರುವಾಗ ಸಾಲ ಪಡೆದವರ ಸಾಲಕ್ಕೆ ಶ್ಯುರಿಟಿ ಹಾಕುವುದು ಎಷ್ಟು ಸರಿ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಸಾಲಕ್ಕೆ ಶ್ಯುರಿಟಿ ಹಾಕುವುದು ಎಂದರೆ ಅದು ಬರೀ ಸಹಿ ಹಾಕುವುದು ಮಾತ್ರವಲ್ಲ, ಸಮಯ ಬಂದಾಗ ಸಾಲಗಾರನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.
*ಸಾಲಗಾರನಿಗೆ ಯಾವಾಗ ಗ್ಯಾರಂಟಿ ಬೇಕಾಗುತ್ತದೆ ?
ಸಾಲಗಾರನ ಫೈನಾನ್ಶಿಯಲ್ ಹಿಸ್ಟರಿಯಲ್ಲಿ ಉತ್ತಮ ಕ್ರೆಡಿಟ್ ಇಲ್ಲದೆ ಹೋದಾಗ , ಹಿಂದಿನ ಮರುಪಾವತಿ ರೆಕಾರ್ಡ್ ಕೂಡ ಸರಿಯಾಗಿರದಿದ್ದರೆ ಆಗ ಗ್ಯಾರಂಟರ್ ಅಗತ್ಯವಿರುತ್ತದೆ. ಅಲ್ಲದೆ, ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುವಾಗಲೂ ಸಾಲಕ್ಕೆ ಗ್ಯಾರಂಟರ್ ನ ಅಗತ್ಯವಿರುತ್ತದೆ.
ಆದಿತ್ಯ ಬಿರ್ಲಾ ಕ್ಯಾಪಿಟಲ್ನ ವೆಬ್ಸೈಟ್ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಸಾಲಗಾರನಿಗೆ ನಿಯಮಿತ ಆದಾಯವಿಲ್ಲದೆ ಹೋಗಿ, ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಲು ಸಾಧ್ಯವಾಗುವುದಿಲ್ಲ ಎಂದಿದ್ದರೆ ಆಗ ಸಾಲಕ್ಕೆ ಖಾತರಿಗಾರರ ಅಗತ್ಯವಿರುತ್ತದೆ.
ಸಾಲಗಾರನು ತನ್ನ ವಾಸಸ್ಥಳವನ್ನು ನಿರಂತರವಾಗಿ ಬದಲಾಯಿಸುತ್ತಿದ್ದು, ಆ ವ್ಯಕ್ತಿ ಸಾಲ ಪಡೆಯಲು ಬಯಸಿದರೆ ಆಗ ಆ ಸಾಲಕ್ಕೆ ಗ್ಯಾರಂಟರ್ ಅಗತ್ಯವಿರುತ್ತದೆ. ಇದಲ್ಲದೆ, ಅನೇಕ ಬಾರಿ ಸಾಲ ನೀಡುವ ಸಂಸ್ಥೆ ಅಂದರೆ ಬ್ಯಾಂಕ್ ಅಥವಾ ಹಣಕಾಸು ಕಂಪನಿ ತನ್ನ ಪಾಲಿಸಿಯಡಿ ಸಾಲ ಖಾತರಿ ಇಲ್ಲದೆ ಸಾಲವನ್ನು ನೀಡುವುದಿಲ್ಲ.
*ಸಾಲಕ್ಕೆ ಶ್ಯುರಿಟಿ ಹಾಕಿದ ವ್ಯಕ್ತಿಗೆ ಆಗುವ ನಷ್ಟ ಏನು ?
ಸಾಲಕ್ಕೆ ಶ್ಯುರಿಟಿ ಹಾಕಿದ ವ್ಯಕ್ತಿಯ ಭವಿಷ್ಯದ ಕ್ರೆಡಿಟ್ ಹಾನಿಗೊಳಗಾಗಬಹುದು. ಸಾಲಗಾರನು ಡೀಫಾಲ್ಟರ್ ಆದಾಗ ಅಂದರೆ ಸಾಲ ಕಟ್ಟದೆ ಹೋದಾಗ ಖಾತರಿದಾರನ ಕ್ರೆಡಿಟ್ ರೇಟ್ ಕೂಡಾ ಹಾಳಾಗುತ್ತದೆ. ಅಂದರೆ ಶ್ಯುರಿಟಿ ಹಾಕಿದ ವ್ಯಕ್ತಿಯ ಕ್ರೆಡಿಟ್ ವ್ಯಾಲ್ಯೂ ಕಡಿಮೆಯಾಗುತ್ತದೆ. ಭವಿಷ್ಯದಲ್ಲಿ ಶ್ಯುರಿಟಿ ಹಾಕಿದ ವ್ಯಕ್ತಿಗೆ ಸಾಲ ಪಡೆಯುವುದು ಕಷ್ಟವಾಗುತ್ತದೆ.
*ನೀವು ಸಾಲಕ್ಕೆ ಖಾತರಿಗಾರರಾಗಬೇಕೇ?
ತಜ್ಞರ ಪ್ರಕಾರ ಬೇರೆಯವರ ಸಾಲಕ್ಕೆ ಗ್ಯಾರಂಟರ್ ಆಗುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಒಳ್ಳೆಯದು. ನಿಮ್ಮ ನಿರ್ಧಾರ ತಕ್ಷಣಕ್ಕೆ ಕೆಲವರಿಗೆ ನೋವು ತರಬಹುದು. ಆದರೆ, ನಿಮ್ಮ ಭವಿಷ್ಯದ ದೃಷ್ಟಿಯಿಂದ ಇದು ಉತ್ತಮ ನಿರ್ಧಾರವಾಗಿರುತ್ತದೆ. ಒಂದು ವೇಳೆ ಸಾಲಗಾರ ನಿಮ್ಮ ಸಂಗಾತಿ ಅಥವಾ ನಿಮ್ಮ ಮಗ, ಮಗಳು ಆಗಿದ್ದರೆ ನೀವು ಸಹಿ ಹಾಕುವುದರಲ್ಲಿ ಹೆಚ್ಚು ಅಪಾಯವಿರುವುದಿಲ್ಲ.