ಅಕ್ರಮ ಮರಳುಗಾರಿಕೆಗೆ ಗಣಿ ಇಲಾಖೆಯೊಂದಿಗೆ ತಹಶೀಲ್ದಾರ್ ದಾಳಿ | 3 ಲಾರಿ,1 ಜೆಸಿಬಿ ವಶಕ್ಕೆ
ಉಡುಪಿ : ಕಾಪು ತಾಲೂಕಿನ ಶಿರ್ವದ ಕಲ್ಲೊಟ್ಟು ತೆಂಕಬೆಟ್ಟು ಸೇತುವೆಯ ಕೆಳಗಡೆ ಕೇರಳ ಮೂಲದ ಕೋಶಿ ಎಂಬಾತನ ತೋಟದ ಬಳಿಯ ಜಾಗದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಕಾಪು ತಹಶೀಲ್ದಾರ್ ಪ್ರತಿಭಾ ಆರ್. ಗುರುವಾರ ಸಂಜೆ ದಾಳಿ ನಡೆಸಿದ್ದಾರೆ.
ಕಳೆದ 2-3 ದಿನಗಳಿಂದ ಅಕ್ರಮ ದಂಧೆಕೋರರು ಯಂತ್ರ ಬಳಸಿ ಮರಳುಗಾರಿಕೆ ನಡೆಸುತ್ತಿದ್ದು ದಾಳಿಯ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ. ಕಾಪು ತಹಶೀಲ್ದಾರ್ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಶಿರ್ವ ಪೊಲೀಸರ ಸಮಕ್ಷಮದಲ್ಲಿ 3 ಲಾರಿ ಮತ್ತು ಒಂದು ಜೆಸಿಬಿಯನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಗಣಿ ಇಲಾಖೆಯ ಅಧಿಕಾರಿ ಸಂಧ್ಯಾ ಕುಮಾರಿ ಬಿ.ಎನ್ , ಕಾಪು ಕಂದಾಯ ನಿರೀಕ್ಷಕ ಸುಧೀರ್ ಕುಮಾರ್ ಶೆಟ್ಟಿ,ಶಿರ್ವ ಗ್ರಾಮ ಕರಣಿಕ ವಿಜಯ್ ಮತ್ತು ಶಿರ್ವ ಪೊಲೀಸರು ಪಾಲ್ಗೊಂಡಿದ್ದರು.