ಬೆಳ್ತಂಗಡಿ | ನಡ ಪರಿಸರದಲ್ಲಿ ಶುರುವಾಗಿದೆ ‘ಕರಡಿ’ ಕಾಟ
ಬೆಳ್ತಂಗಡಿ: ತಾಲೂಕಿನ ನಡ ಗ್ರಾಮದ ಕೂಡೇಲು,ಅಗಳಿ ಕಿಂಡಾಜೆ ಮೊದಲಾದ ಪರಿಸರಗಳಲ್ಲಿ ಕಳೆದ ಕೆಲವು ದಿನಗಳಿಂದ ಕರಡಿಗಳು ಕಂಡು ಬರುತ್ತಿರುವ ಕುರಿತು ಸ್ಥಳೀಯರು ತಿಳಿಸಿದ್ದಾರೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಸಮೀಪ ಇರುವ ಈ ಪ್ರದೇಶದಲ್ಲಿ ಬೆರಳೆಣಿಕೆಯ ಕೆಲವು ಮನೆಗಳಿವೆ. ಮನೆಗಳು ಅರಣ್ಯಕ್ಕೆ ಹತ್ತಿರವಿದ್ದು, ಇಲ್ಲಿ ಸಂಜೆ ಹಾಗೂ ರಾತ್ರಿ ವೇಳೆ 2 ಕರಡಿಗಳು ಕಾಣಿಸುತ್ತಿವೆ. ಇದರಿಂದ ಸಂಜೆಯ ಬಳಿಕ ಜನಸಂಚಾರಕ್ಕೆ ಭಯಪಡುವಂತಾಗಿದೆ. ಕರಡಿಗಳು ರಸ್ತೆ ದಾಟುವುದನ್ನು ಹಾಗೂ ತೋಟ ಪ್ರದೇಶದಲ್ಲಿ ಇರುವುದನ್ನು ಕಂಡಿರುವುದಾಗಿ ಸ್ಥಳೀಯರು ಹೇಳಿದ್ದಾರೆ.
ಆದರೆ ಈ ಬಗ್ಗೆ ಯಾವುದೇ ರೀತಿಯ ಅಧಿಕೃತ ಮಾಹಿತಿ
ಬಂದಿರುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಕೆಲವು ವರ್ಷಗಳ ಹಿಂದೆ ಚಿರತೆ, ಹುಲಿಗಳ ಕಾಟವೂ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಕಂಡುಬಂದಿಲ್ಲ.