15 ವರ್ಷಗಳ ಹಿಂದೆ ಬಗೆಹರಿಸಲಾಗದೇ ಬದಿಗಿಟ್ಟಿದ್ದ ಕೊಲೆ ರಹಸ್ಯ ಬಯಲು | ಅದ್ಯಾವ ಟರ್ನಿಂಗ್ ಪಾಯಿಂಟ್ ನೀಡಿತು ಸುಳಿವು ?!
ಸುಮಾರು ಹದಿನೈದು ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು, ಬಂಧನಕ್ಕೆ ಟರ್ನಿಂಗ್ ಪಾಯಿಂಟ್ ಎಂಬಂತೆ ಸಿಕ್ಕಿದ್ದು ಮಾತ್ರ ಅದೊಂದು ಚಿನ್ನ ಕಳವು ಪ್ರಕರಣ. ಚಿಕ್ಕಬಳ್ಳಾಪುರದಲ್ಲಿ ನಡೆದ ಚಿನ್ನ ಕಳವು ಪ್ರಕರಣದ ಆರೋಪಿಗಳು, 2006 ರಲ್ಲಿ ಬೆಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ತುಂಬಾ ಬೇಕಾಗಿದ್ದರು ಎಂದರೆ ನಂಬಲಸಾಧ್ಯ.
ಈ ಕಳವು ಪ್ರಕರಣದಲ್ಲಿ ಕೊಲೆ ಆರೋಪಿಯು ಭಾಗಿಯಾಗಿದ್ದು, ಆತನ ಬೆರಳಚ್ಚು ಹಾಗೂ ಆ ಕೊಲೆ ನಡೆಸಿದ ವ್ಯಕ್ತಿಯ ಬೆರಳಚ್ಚು ಒಂದಕ್ಕೊಂದು ಹೋಲಿಕೆ ಆದಾಗ,ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆಯಲ್ಲಿ ಆತ ನಡೆದ ವಿಚಾರವನ್ನು ಬಾಯಿ ಬಿಟ್ಟಿದ್ದ.
ಘಟನೆ ವಿವರ:
2006 ರಲ್ಲಿ ಬೆಂಗಳೂರಿನ ಮಹಾನಗರ ಪಾಲಿಕೆಯ ಯಶವಂತಪುರ ಬಿ ಕೆ ನಗರದ 2ನೇ ಕ್ರಾಸ್ ನಲ್ಲಿ, ವಿಡಿಯೋ ಗೇಮ್ ಸೆಂಟರ್ ಮಾಲೀಕರೊಬ್ಬರ ಕೊಲೆ ನಡೆದಿರುತ್ತದೆ. ಮಾಲೀಕ ಶಶಿಂದ್ರನ್ ಎಂಬವರನ್ನು ದುಷ್ಕರ್ಮಿಗಳ ತಂಡವೊಂದು ಬರ್ಬರವಾಗಿ ಕೊಲೆ ನಡೆಸಿ ಪರಾರಿಯಾಗಿತ್ತು. ಕೊಲೆಯ ತೀವ್ರತೆ ಎಷ್ಟಿತ್ತು ಎಂದರೆ, ಆತನ ಕೈಕಾಲು ಕಟ್ಟಿ, ಮೂಗಿಗೆ ಪ್ಲಾಸ್ಟರ್ ಸುತ್ತಿ ಕೊಲೆ ನಡೆಸಲಾಗಿತ್ತು. ಅದೊಂದು ಭೀಕರ ಕೊಲೆಯಾದ್ದರಿಂದ ಇಡೀ ಪ್ರದೇಶವೇ ಒಂದುಬಾರಿ ಭಯದಿಂದ ಉಸಿರು ಬಿಡುತ್ತಾ,ಮೌನವಾಗಿತ್ತು.ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲೂ ಕೊಲೆಗಡುಕರ ಪತ್ತೆಗೆ ಪ್ರಯತ್ನಿಸಿದರೂ ಕೊಲೆಗಡುಕರ ಸುಳಿವು ಸಿಗದೇ, 2008 ರಲ್ಲಿ ನ್ಯಾಯಾಲಯಕ್ಕೆ ಸಿ ವರದಿ ಸಲ್ಲಿಸಿ ಪ್ರಕರಣದ ಆರೋಪಿಗಳ ಬಂಧನ ಕಾರ್ಯ ಅರ್ಧಕ್ಕೆ ನಿಲ್ಲಿಸಿತ್ತು. ಇಲ್ಲಿ ಬೆರಳಚ್ಚುಗಾರರು ನೀಡಿದ್ದ ಬೆರಳು ಮುದ್ರೆ ಮಾತ್ರ ಸಂಗ್ರಹವಾಗಿತ್ತು.
ಆದರೆ 2010 ರಲ್ಲಿ ಎಚ್ ಎಸ್ ಆರ್ ಲೇಔಟ್ ನಿವಾಸಿಯೊಬ್ಬರು ತನ್ನ ಸ್ನೇಹಿತರೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮಕ್ಕೆ ಪ್ರವಾಸಕ್ಕೆಂದು ಬಂದಿದ್ದ ಸಂದರ್ಭದಲ್ಲಿ ಅವರ ಚಿನ್ನವು ಕಳೆದು ಹೋಗುತ್ತದೆ. ಈ ಬಗ್ಗೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತದೆ.
ಇದೇ ಸಂದರ್ಭದಲ್ಲಿ ಬೆಂಗಳೂರು ಜಿಲ್ಲೆಯ ಬೆರಳಚ್ಚು ವಿಭಾಗದ ಪೊಲೀಸರು ಆಟೋಮ್ಯಾಟಿಕ್ ಫಿಂಗರ್ ಪ್ರಿಂಟ್ ಐಡೆಂಟಿಫೈಡ್ ತಂತ್ರಾಂಶದ ಪರಿಶೀಲನೆಯನ್ನು ನಡೆಸುತ್ತಿರುತ್ತಾರೆ. ಇದೇ ಸಂದರ್ಭದಲ್ಲಿ ಚಿಕ್ಕಬಳ್ಳಾಪುರದಲ್ಲಿ 2010 ರಲ್ಲಿ ದಾಖಲಾಗಿದ್ದ ಚಿನ್ನ ಕಳವು ಆರೋಪಿಯ ಬೆರಳ ಮುದ್ರೆ ಹಾಗೂ ಬೆಂಗಳೂರಿನಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯೋರ್ವನ ಬೆರಳ ಮುದ್ರೆ ಒಂದಕ್ಕೊಂದು ಹೋಲಿಕೆಯಾಗುತ್ತದೆ. ಪೊಲೀಸರು ಚುರುಕಾಗುತ್ತದೆ. ಹಳೆಯ ಕೊಲೆ ಕೇಸಿನ ಜೀವಕಳೆದುಕೊಂಡ ಫೈಲುಗಳು ದೂಳು ಕೊಡವಿಕೊಂಡು ಮತ್ತೆ ಎದ್ದು ಕೂರುತ್ತವೆ.
ಇದೇ ಮಾಹಿತಿ ಆಧರಿಸಿದ ಪೊಲೀಸರು ಅರ್ಧಕ್ಕೆ ನಿಲ್ಲಿಸಿದ್ದ ತಮ್ಮ ಕಾರ್ಯಾಚರಣೆಯನ್ನು ಪುನಃ ಶುರು ಮಾಡುತ್ತಾರೆ. ಚಿನ್ನ ಕಳವು ಆರೋಪಿಯನ್ನು ತಮ್ಮ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಆತನ ಇನ್ನೂ ಐದು ಮಂದಿ ಗೆಳೆಯರೊಂದಿಗೆ ಸೇರಿ ಕೊಲೆ ನಡೆಸಿದ್ದಾಗಿ ಇಂಚಿಂಚು ಮಾಹಿತಿಗಳನ್ನು ಆತ ಬಾಯಿ ಬಿಟ್ಟಿದ್ದಾನೆ.
ಕಾನೂನಿನಿಂದ ಯಾರೂ ಕೂಡಾ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುವುದಕ್ಕೆ ಈ ಪ್ರಕರಣ ನೈಜ ಮತ್ತು ತಾಜಾ ಉದಾಹರಣೆ. ಅದೇನೇ ಇರಲಿ, ನ್ಯಾಯ ಸಿಗದೇ ನೊಂದಿರುವ ಕುಟುಂಬಕ್ಕೆ ಆರೋಪಿಗಳ ಬಂಧನದಿಂದ ಕಾನೂನಿನ ಮೇಲೆ ನಂಬಿಕೆ ಉಳಿದಿರುವುದು ಮಾತ್ರ ಸತ್ಯ.