ಕಳ್ಳತನ ಮಾಡಿ ವಾಪಸ್ಸು ಹೋಗುವಾಗ ‘ ಸ್ಸಾರಿ ಫ್ರೆಂಡ್ ‘ ಎಂದು ಬರೆದಿಟ್ಟು ಹೋದ ಕಳ್ಳ | ದುಡ್ಡು ಆದಾಗ ಹಣ ವಾಪಾಸ್ ಮಾಡುವ ಭರವಸೆ ಬೇರೆ !

ಭೋಪಾಲ್: ಕಳ್ಳತನ ಮಾಡುವುದು ಹೇಯ ಕೆಲಸ. ಅದಕ್ಕೆ ಕ್ಷಮೆ ಇಲ್ಲ. ಅಂತವರ ಮೇಲೆ ಒಂದಿಷ್ಟು ಕರುಣೆ ಕೂಡ ಹುಟ್ಟುವುದಿಲ್ಲ. ಆದರೆ ಇಲ್ಲೊಬ್ಬ ಕಳ್ಳ, ತಾನು ಹೊಕ್ಕ ಮನೆಯಿಂದ ನಗನಾಣ್ಯಗಳನ್ನು ದೋಚಿದ್ದರೂ,ತನ್ನ ಮೇಲೆ ಒಂದಷ್ಟು ಕರುಣೆ ಮೂಡುವಂತೆ ಮಾಡಿದ್ದಾನೆ.

ಪೊಲೀಸ್ ಅಧಿಕಾರಿಯ ಮನೆಯಲ್ಲಿ ಬೆಲೆಬಾಳುವ ವಸ್ತು ಕಳ್ಳತನ ಮಾಡಿದ ಕಳ್ಳ ಕ್ಷಮಾಪಣ ಪತ್ರ ಬರೆದಿಟ್ಟಿರುವ ಘಟನೆ ಮಧ್ಯಪ್ರದೇಶದ ಭಿಂದ್ ನಗರದಲ್ಲಿ ನಡೆದಿದೆ.

ಕೊತ್ವಾಲ್ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ (ಎಎಸ್‍ಐ) ಕಮಲೇಶ್ ಕಟಾರೆ, ಛತ್ತೀಸ್‍ಗಢದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬ ಭಿಂಡ್ ನಗರದಲ್ಲಿ ವಾಸಿಸುತ್ತಿದೆ. ಪೊಲೀಸರ ಪತ್ನಿ ಮತ್ತು ಅವರ ಮಕ್ಕಳು ಜೂನ್ 30 ರಂದು ಸಂಬಂಧಿಕರ ಮನೆಗೆ ತೆರಳಿದ್ದರು.
ಮನೆಗೆ ಮರಳಿ ಬಂದಾಗ ಅವರ ಮನೆಯ ಬೀಗ ಮುರಿದು ಬಿದ್ದಿತ್ತು. ವಸ್ತುಗಳು ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿ ಹರಡಿದ್ದವು. ಚಿನ್ನ ಬೆಳ್ಳಿ ಮತ್ತು ಹಣ ಮನೆಯಿಂದ ಕಾಣೆಯಾಗಿತ್ತು. ಬಳಿಕ ಮನೆಯೊಳಗೆ ಸಿಕ್ಕ ಪತ್ರದಲ್ಲಿ ಕಳ್ಳನು, “ಕ್ಷಮಿಸಿ ಫ್ರೆಂಡ್, ಇದು ತುಂಬಾ ಅನಿವಾರ್ಯವಾಗಿತ್ತು. ನಾನು ಇದನ್ನು ಮಾಡದಿದ್ದರೆ, ನನ್ನ ಸ್ನೇಹಿತನು ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದನು. ಚಿಂತಿಸಬೇಡಿ, ನಾನು ಹಣವನ್ನು ಪಡೆದ ತಕ್ಷಣ ಕದ್ದ ಹಣವನ್ನು ಹಿಂದಿರುಗಿಸುತ್ತೇನೆ ” ಎಂದು ಭರವಸೆಯನ್ನು ನೀಡಿ ಕಳ್ಳ ಬರೆದಿರುವ ಪತ್ರ ಸಿಕ್ಕಿದೆ. ಗೆಳೆಯನ ಯಾವುದೋ ಸಹಾಯಕ್ಕೆ ಬೇಕಾಗಿ ಈ ಕಳ್ಳತನದ ಕೃತ್ಯ ಎಸಗಿರುವ ಬಗ್ಗೆ ಈ ಮೂಲಕ ಸಂಶಯ ಮೂಡಿದೆ.

ಪೊಲೀಸರ ಪ್ರಕಾರ ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನು ಕಳ್ಳತನ ಮಾಡಲಾಗಿದೆ ಮತ್ತು ಕುಟುಂಬದ ಕೆಲವು ಪರಿಚಯಸ್ಥರು ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

Leave A Reply

Your email address will not be published.