ರಾಜ್ಯದ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನಡೆಯುತ್ತಿದೆ ಅಕ್ರಮ | ಭಯೋತ್ಪಾದಕ ಹಾಗೂ ನಕ್ಸಲ್ ಕೃತ್ಯಕ್ಕೆ ಬಳಕೆಯಾಗುತ್ತಿದೆ ಸರ್ಕಾರಿ ಹಣ

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಜನರು ಪಾವತಿಸುವ ಹಣ ಅಧಿಕಾರಿಗಳ ಖಾಸಗಿ ಖಾತೆಗೆ ವರ್ಗಾವಣೆಯಾಗಿ ದುರ್ಬಳಕೆಯಾಗುತ್ತಿರುವ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ, ಸರ್ಕಾರಿ ಖಜಾನೆ ಸೇರುವ ಅದೇ ಹಣ ರಾಜ್ಯದಲ್ಲಿರುವ ನಕ್ಸಲರು ಹಾಗೂ ಉಗ್ರ ಸಂಘಟನೆಗಳ ಕೃತ್ಯಕ್ಕೂ ಬಳಕೆಯಾಗುತ್ತಿರುವ ಸ್ಫೋಟಕ ಸಂಗತಿ ಬಯಲಾಗಿದೆ.

ಉಪನೋಂದಣಿ ಕಚೇರಿಗಳಲ್ಲಿ ಆಸ್ತಿ, ಸ್ಥಿರಾಸ್ತಿ, ಕರಾರುಪತ್ರ, ಸಾಲ ತಿರುವಳಿ, ಋಣಬಾಧ್ಯತಾ ಪತ್ರ ಹಾಗೂ ಸಾಗುವಳಿ ಜಮೀನು ಒಪ್ಪಂದ ಸಂಬಂಧ ಜನರು ಪಾವತಿಸುವ ಶುಲ್ಕವನ್ನು ಸರ್ಕಾರಕ್ಕೆ ಜಮೆ ಮಾಡದೆ ಕೆಲ ಅಧಿಕಾರಿಗಳು ಕಾನೂನುಬಾಹಿರವಾಗಿ ತಮ್ಮ ವೈಯಕ್ತಿಕ ಖಾತೆಗಳಿಗೆ ವರ್ಗಾವಣೆ ಹಾಗೂ ಸೈಬರ್ ಹ್ಯಾಕ್ ಮೂಲಕ ಹವಾಲದಂತಹ ವ್ಯವಹಾರಗಳಿಗೆ ಬಳಸಿಕೊಳ್ಳುತ್ತಿರುವುದು ಇತ್ತೀಚೆಗೆ ಬಹಿರಂಗವಾಗಿತ್ತು. ಈ ಕಾರಣಕ್ಕೆ ಆನ್‌ಲೈನ್ ಪಾವತಿ ವ್ಯವಸ್ಥೆ ಜಾರಿಗೊಳಿಸಲಾಗಿತ್ತು.

ಇದೀಗ ಅನಧಿಕೃತ ಅಥವಾ ಅಸ್ತಿತ್ವ ಇಲ್ಲದ ಖಾತೆಗಳಿಗೆ ಹವಾಲಾ ಹಣವನ್ನು ಜಮೆ ಮಾಡಿ ಅದು ಭಯೋತ್ಪಾದನೆ ಮತ್ತು ನಕ್ಸಲ್ ಚಟುವಟಿಕೆಗಳಿಗೆ ಪಾವತಿಯಾಗುತ್ತಿರುವ ಬಗ್ಗೆ ಬಲವಾದ ಅನುಮಾನ ಮೂಡಿದೆ. ಇಲಾಖೆಯ ಸಬ್ ರಿಜಿಸ್ಟ್ರಾರ್‌ರೊಬ್ಬರು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಭಯೋತ್ಪಾದನೆ ಮತ್ತು ನಕ್ಸಲ್ ಚಟುವಟಿಕೆಗಳಿಗೆ ಹಣ ಸಂದಾಯವಾಗುತ್ತಿರುವ ಬಗ್ಗೆ ಸಾಕ್ಷ್ಯ ಸಮೇತ ಉಲ್ಲೇಖಿಸಿದ್ದಾರೆ.

ನಕ್ಸಲರು ಮತ್ತು ಭಯೋತ್ಪಾದಕ ಬೆಂಬಲಿತ ಸಂಘಟನೆಗಳಿಗೆ ಹಣ ಪಾವತಿಸಲು ಅನುಕೂಲವಾಗಲೆಂದು ನಕಲಿ ಗುರುತಿನ ಚೀಟಿ ಮತ್ತು ಪ್ಯಾನ್ ಕಾರ್ಡ್‌ಗಳನ್ನು ಸೃಷ್ಟಿಸಲಾಗುತ್ತಿದೆ. ಇಂತಹ ನಕಲಿ ಖಾತೆಗಳಿಗೆ ಕಾನೂನು ಬಾಹಿರ ಚಟುವಟಿಕೆಗಳಿಗಾಗಿ ಅನ್ಯ ರಾಜ್ಯಗಳಿಂದ ಹವಾಲಾ ಹಣ ಪೂರೈಕೆಯಾಗುತ್ತಿದೆ. ಆದರೆ, ಇದರ ಮೂಲ ಎಲ್ಲಿ? ಯಾರಿಂದ? ಯಾಕೆ? ಎಂಬುದರ ಅಂಶಗಳ ಬಗ್ಗೆ ಸಮರ್ಪಕವಾಗಿ ಪರಿಶೀಲಿಸಿ ತನಿಖೆ ಕೈಗೊಳ್ಳಬೇಕು ಎಂದು ಕೇಂದ್ರ ಅಪರಾಧ ದಳಕ್ಕೆ (ಸಿಸಿಬಿ) ಸಬ್ ರಿಜಿಸ್ಟ್ರಾರ್ ದೂರು ನೀಡಿದ್ದಾರೆ.

ದೂರಿನಲ್ಲಿ ಹೀಗಿದೆ:

*ನೋಂದಣಿ ಕಚೇರಿಗಳಲ್ಲಿ ಚಲನ್ ಮೂಲಕ ಪಾವತಿ ಮಾಡಿದ ಮುದ್ರಾಂಕ ಶುಲ್ಕ ಸರ್ಕಾರಕ್ಕೆ ಜಮೆಯಾಗಬೇಕು. ಕೆಲವರು ಸರ್ಕಾರಕ್ಕೆ ಜಮೆ ಮಾಡದೆ ನಕಲಿ ಪಾವತಿ ಐಡಿ ಮತ್ತು ಉಪಯೋಗಿಸಿರುವ ಬಿಲ್ ಸಂಖ್ಯೆ ಬಳಸಿ ಸರ್ಕಾರಿ ಖಜಾನೆಯಿಂದ ಹಣವನ್ನು ಖಾಸಗಿ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.

*ಕಾನೂನುಬಾಹಿರವಾಗಿ ಹವಾಲ ವ್ಯವಹಾರಗಳಿಗೆ ಬಳಸಿಕೊಳ್ಳುತ್ತಿರುವುದು, ಸೈಬರ್ ಹ್ಯಾಕಿಂಗ್ ಮೂಲಕ ಹಣ ಲಪಟಾಯಿಸುವುದು, ರದ್ದುಗೊಂಡಿರುವ ಪಿಡಿ ಖಾತೆಗಳಿಗೆ ಮತ್ತು ಸರ್ಕಾರದ ಅನುಮತಿ ಇಲ್ಲದೆ ಅನಧಿಕೃತ ಠೇವಣಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಳ್ಳಲಾಗುತ್ತಿದೆ.

*ಒಂದೇ ಬ್ಯಾಂಕ್ ಖಾತೆಯಲ್ಲಿ ಎರಡು ಪ್ರತ್ಯೇಕ ವಹಿವಾಟು, ಒಂದಕ್ಕೆ ಬೇರೆಬೇರೆ ಅಕೌಂಟ್ ಸ್ಟೇಟ್ ಮೆಂಟ್ ನಿರ್ವಹಿಸುವ ಮೂಲಕ ವಾಸ್ತವಿಕ ವಹಿವಾಟು ಮುಚ್ಚಿಡುವ ಅಕ್ರಮ ವ್ಯವಹಾರ ನಡೆಯುತ್ತಿದೆ.

*ಒಬ್ಬ ಬ್ಯಾಂಕ್ ಖಾತೆದಾರನ ಹೆಸರನ್ನು ಬ್ಯಾಂಕ್
ಖಾತೆದಾರ ಮತ್ತು ಗ್ರಾಹಕನ ಕಾಲಂಗಳಲ್ಲಿ ಬೇರೆಬೇರೆ
ಹೆಸರನ್ನು ನಮೂದಿಸಲಾಗುತ್ತಿದೆ. ಇದರಲ್ಲಿ ಕೆಲ
ವಿಧಾನಗಳಿಂದ ಅಕ್ರಮ ಖಾತೆಗಳಿಗೆ ವರ್ಗಾವಣೆಯಾದ
ಹವಾಲ ಹಣ ನಕ್ಸಲರು ಮತ್ತು ಭಯೋತ್ಪಾದಕ
ಬೆಂಬಲಿತ ಸಂಘಟನೆಗಳಿಗೆ ರವಾನೆಯಾಗುತ್ತಿರುವ ಬಗ್ಗೆ
ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಸಬ್‌ ರಿಜಿಸ್ಟ್ರಾರ್ ಸರ್ಕಾರಕ್ಕೆ ದೂರು ಕೊಟ್ಟಿದ್ದಾರೆ.

ಸಾಕ್ಷ್ಯ 1: ಶೃಂಗೇರಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಳೆದ ಜುಲೈನಲ್ಲಿ ಅಲ್ ಇಮ್ರಾನ್ ಎಂಬ ಫಲಾನುಭವಿ ಹೆಸರಿನಲ್ಲಿ ಮುದ್ರಾಂಕ ಶುಲ್ಕ ಅರಣ್ಯ ಇಲಾಖೆ ಶೀರ್ಷಿಕೆಯಡಿ ಪಾವತಿಯಾಗಿತ್ತು. ಈ ವೇಳೆ ಇ-ಪೇಮೆಂಟ್ ಫೈಲ್ ಸಂಖ್ಯೆ ಪರಿಶೀಲಿಸಿದಾಗ ಒಂದೇ ಸಂಖ್ಯೆಯ ತಲಾ 2 ಬಿಲ್‌ಗಳಿಗೆ ಮತ್ತು ಒಂದೇ ಸಂಖ್ಯೆಯ 4 ಬಿಲ್‌ಗಳು ಸೇರಿ ಒಟ್ಟು 8 ಬಿಲ್‌ಗಳಿಂದ ಹಾಗೂ ಆರು ವೋಚರ್ ಸಂಖ್ಯೆಗಳಿಂದ ಈ ಹೆಸರಿಗೆ ಒಟ್ಟಾರೆ 25,96,858 ರೂ. ಪಾವತಿಯಾಗಿದೆ. ಆದರೆ, ಶೃಂಗೇರಿಯಲ್ಲಿ ಈ ಹೆಸರಿನ ಸಂಸ್ಥೆಯೇ ಇಲ್ಲ. ಗೂಗಲ್‌ನಲ್ಲಿ ಶೋಧಿಸಿದಾಗ ಉಗ್ರ ಸಂಘಟನೆಗಳನ್ನು ಬೆಂಬಲಿಸಿದ ಸಂಸ್ಥೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಇದು ದೇಶದ ಆಂತರಿಕ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರಬಹುದಾದ ಆತಂಕವನ್ನು ಹುಟ್ಟು ಹಾಕಿದೆ. ಈ ಪಾವತಿಗಳು ಶೃಂಗೇರಿ ಅರಣ್ಯ ಇಲಾಖೆಗೆ ಸಂಬಂಧಪಟ್ಟಿದೆ. 2020ರ ಜುಲೈನಲ್ಲಿ ಕಚೇರಿ ಲೆಕ್ಕ ಮರು ಹೊಂದಾಣಿಕೆ ಸಂದರ್ಭ ಶೃಂಗೇರಿ ಉಪನೋಂದಣಿ ಕಚೇರಿಯ ಜಮಾ ವಿವರಗಳಲ್ಲಿ ವಾಸ್ತವವಾಗಿ ಕೇವಲ 9 ಲಕ್ಷ ರೂ. ಸರ್ಕಾರಕ್ಕೆ ಜಮಾಯಿಸಿದ್ದರೂ ಖಜಾನೆ ಇಲಾಖೆ ನಮೂನೆ ಕೆಟಿಸಿ 25ರಲ್ಲಿ 36 ಲಕ್ಷಕ್ಕಿಂತ ಅಧಿಕ ಮೊತ್ತ ದಾಖಲಾಗಿದೆ. ಹಾಗಾಗಿ 14 ಬಿಲ್‌ಗಳ ಪಾವತಿ ಬಗ್ಗೆ ಪರಿಶೀಲಿಸಬೇಕಿದೆ.

ಸಾಕ್ಷ್ಯ 2: 2020ರ ಜು.8ರಂದು ಲೆಕ್ಕ ಶೀರ್ಷಿಕೆ 2225ರಲ್ಲಿ ಇ-ಪೇಮೆಂಟ್ ಫೈಲ್ ಸಂಖ್ಯೆ ಸೇರಿ ಇನ್ನಿತರ ಬೇರೆಬೇರೆ ಸಂಖ್ಯೆಯಲ್ಲಿ ಚಾಣಕ್ಯ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಒಟ್ಟಾರೆ 8,12,177 ರೂ. ಹಣ ಪಾವತಿಯಾಗಿದೆ. ಸಮಗ್ರೂಪ್ ಕಲ್ಯಾಣ, ಮಕ್ಕಳ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಪೇಮೆಂಟ್ ಲೆಕ್ಕ ಶೀರ್ಷಿಕೆಗಳಡಿ ಇದು ಪಾವತಿಯಾಗಿದೆ ಇದು ದಾವಣಗೆರೆಯ ಖಾಸಗಿ ಸಂಸ್ಥೆ ಎಂದು ಅನಧಿಕೃತವಾಗಿ ತಿಳಿದುಬಂದಿದೆ. ಸಂಸ್ಥೆಯ ಮಾಲೀಕ ಶೃಂಗೇರಿಯವರಾಗಿದ್ದು, ದಾವಣಗೆರೆ ವಿಳಾಸ ಬಳಸಿ ವ್ಯವಹರಿಸಿದ್ದಾರೆ. ಶೃಂಗೇರಿಯ ಸಮಾಜ ಕಲ್ಯಾಣಾಧಿಕಾರಿ ತಮ್ಮ ಕಚೇರಿಯಿಂದ ಸಂಸ್ಥೆಯೊಂದರ ಹೆಸರಿನಲ್ಲಿ 2017ರಿಂದ 2021ರವರೆಗೆ ಅವಧಿಯಲ್ಲಿ ಯಾವುದೇ ಬಿಲ್ ಪಾವತಿಸಿಲ್ಲ ಎಂಬುದು ಆರ್‌ಟಿಐಯಲ್ಲಿ ತಿಳಿಸಿದ್ದಾರೆ. ಇದು ನಕ್ಸಲರಿಗೆ ಆರ್ಥಿಕವಾಗಿ ಹಣ ಸಂಗ್ರಹಣೆ ನಡೆಯುತ್ತಿದೆ ಎಂಬ ಅನುಮಾನ ಬರುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಉಪನೋಂದಣಿ ಕಚೇರಿಗೆ ಸಾಕಷ್ಟು ಅಕ್ರಮ ವ್ಯವಹಾರಗಳು ನಡೆಯುತ್ತಿವೆ. ಈ ಪೈಕಿ ಬೆರಳೆಣಿಕೆಯಷ್ಟು ಪ್ರಕರಣಗಳು ಮಾತ್ರ ಬೆಳಕಿಗೆ ಬರುತ್ತಿವೆ. ಈ ಬಗ್ಗೆ ಸಮರ್ಪಕವಾಗಿ ತನಿಖೆ ನಡೆಸುವ ಅಗತ್ಯವಿದೆ. ಪ್ರತಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪಾವತಿ ವರದಿಯನ್ನು ಪರಿಶೀಲಿಸಿದರೆ ಅನೇಕ ಅಕ್ರಮಗಳು ಬಹಿರಂಗವಾಗಲಿವೆ ಎಂಬುದು ಸಬ್ ರಿಜಿಸ್ಟ್ರಾರ್ ಅವರ ಅಭಿಪ್ರಾಯವಾಗಿದೆ.

Leave A Reply

Your email address will not be published.