ಪುತ್ತೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಒಳಮೊಗ್ರುವಿನ ಶಾಫಿ ಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧಿಗೆ ಪುತ್ತೂರು ಪೋಕ್ಸೋ ವಿಶೇಷ ನ್ಯಾಯಾಲಯ ಹಾಗೂ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಲ್ಕುವರೆ ವರ್ಷ ಸಾದಾ ಸ್ವರೂಪದ ಶಿಕ್ಷೆ ಹಾಗೂ ರೂ. 16,000 ದಂಡ ವಿಧಿಸಿ ಜುಲೈ 05ರಂದು ಆದೇಶ ಹೊರಡಿಸಿದೆ.

 

ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಶಾಫಿ ಆಡ್ಕ ಅಲಿಯಾಸ್ ಇಬ್ರಾಹಿಂ ಇ.ಎ. ಶಿಕ್ಷೆಗೆ ಗುರಿಯಾದ ಅಪರಾಧಿ.

ಪ್ರಕರಣದ ಹಿನ್ನೆಲೆ :
ಇಬ್ರಾಹಿಂ 10.02.2016 ರಂದು ಅಪ್ರಾಪ್ತೆ ಬಾಲಕಿಯ ಮನೆಗೆ ನುಗ್ಗಿ ಲೈಂಗಿಕ ಕಿರುಕುಳ ನೀಡಿದ್ದ. ಈ ಕುರಿತು ಸಂತ್ರಸ್ತೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಳು. ಬಾಲಕಿಯ ದೂರಿನ ಮೇರೆಗೆ ಪೊಲೀಸರು ಈತನ ವಿರುದ್ಧ ಐಪಿಸಿ ಸೆಕ್ಷನ್ 448, 354 ಮತ್ತು ಪೋಕ್ಸೋ ಕಾಯ್ದೆ ಕಲಂ 12 ರಡಿ ಎಫ್ ಐ ಆರ್ ದಾಖಲಿಸಿಕೊಂಡಿದ್ದರು. ಅಂದಿನ ಪುತ್ತೂರು ಗ್ರಾಮಾಂತರ ಠಾಣಾ ಪಿ.ಎಸ್.ಐ. ರವಿ ಬಿ.ಎಸ್. ರವರು ಆರೋಪಿ ವಿರುದ್ಧ ಸಮಗ್ರ ತನಿಖೆ ನಡೆಸಿ ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಇದೀಗ ವಿಚಾರಣೆ ಅಂತ್ಯಗೊಳಿಸಿರುವ ನ್ಯಾಯಾಧೀಶ ರುಡಾಲ್ಫ್ ಪಿರೇರಾ ಅವರು ಅಪರಾಧಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ.

ದಂಡದ ಪ್ರಮಾಣ
ಆರೋಪಿಗೆ ಐಪಿಸಿ ಸೆಕ್ಷನ್ 354 ರಡಿ ಅಪರಾಧಕ್ಕೆ 1 ವರ್ಷ ಸಾದಾ ಸ್ವರೂಪದ ಶಿಕ್ಷೆ ಮತ್ತು ರೂ. 5,000/- ದಂಡ, ದಂಡ ತೆರಲು ತಪ್ಪಿದ್ದಲ್ಲಿ 3 ತಿಂಗಳು ಸಾದಾ ಸ್ವರೂಪದ ಶಿಕ್ಷೆ, ಭಾ.ದಂ.ಸಂ. ಕಲಂ 448 ರಡಿ ಅಪರಾಧಕ್ಕೆ 6 ತಿಂಗಳು ಸಾದಾ ಸ್ವರೂಪದ ಶಿಕ್ಷೆ ಮತ್ತು ರೂ. 1,000/- ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಸ್ವರೂಪದ ಶಿಕ್ಷೆ ಮತ್ತು ಕಲಂ 7, 8, 11, 12 ಷೋ ಕಾಯ್ದೆಯಡಿ ಅಪರಾಧಕ್ಕೆ 3 ವರ್ಷ ಸಾದಾ ಸ್ವರೂಪದ ಶಿಕ್ಷೆ ಮತ್ತು ರೂ. 10,000/- ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಸಾದಾ ಸ್ವರೂಪದ ಶಿಕ್ಷೆ ವಿಧಿಸಿ ತೀರ್ಪಿತ್ತಿದ್ದಾರೆ.

ಒಟ್ಟು ದಂಡದ ಮೊತ್ತ ರೂ. 16,000/- ದಲ್ಲಿ ರೂ. 15,000/- ವನ್ನು ಬಾಲಕಿಗೆ ನೀಡಲು ನ್ಯಾಯಾಲಯವು ಆದೇಶಿಸಿದೆ. ದಂ.ಪ್ರ.ಸಂ. ಕಲಂ 357(ಎ) ಹಾಗೂ ಷೋ ಕಾಯ್ದೆ ಕಲಂ 33(8) ಜೊತೆಗೆ ನಿಯಮ 7 ರಡಿ ರೂ.15,000/- ಪರಿಹಾರ ನೀಡಲು ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿದೆ.

ಸರ್ಕಾರದ ಪರವಾಗಿ ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಕುದ್ರಿಯ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.

Leave A Reply

Your email address will not be published.